ಶಿವಾನಂದ ಹಿರೇಮಠ ವಿಸ್ತಾರ ನ್ಯೂಸ್ ಗದಗ
ಜಿಲ್ಲೆಯಲ್ಲಿ ಜೂನ್ ನಿಂದಲೂ ಸುರಿಯುತ್ತಿರುವ ನಿರಂತರ ಮಳೆಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಈಗ ಮಾಡಲಾಗಿರುವ ಅಂದಾಜಿನ ಪ್ರಕಾರ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಕೃಷಿ ಹಾನಿಯಾಗಿದ್ದು ಗದಗ ಜಿಲ್ಲೆಯಲ್ಲಿ. ತೋಟಗಾರಿಕೆ, ಕೃಷಿ ಭೂಮಿ ಸೇರಿ 3.90 ಲಕ್ಷ ಹೆಕ್ಟೇರ್ ಸಾಗುವಳಿ ಕೃಷಿ ಭೂಮಿ ಜಿಲ್ಲೆಯಲ್ಲಿದ್ದು, 1.70 ಲಕ್ಷ ಹೆಕ್ಟೇರ್ ಬೆಳೆನಾಶವಾಗಿದೆ. ಅಂದರೆ ಶೇಕಡಾ ೫೧ರಷ್ಟು ಕೃಷಿ ಹಾನಿ ಸಂಭವಿಸಿದೆ.
ಕಾಲಮಾನದಲ್ಲಿ ಬದಲಾವಣೆ ಆಗುತ್ತಿರುವ ಕಾರಣದಿಂದ ಜಿಲ್ಲೆಯಲ್ಲಿ ಅಕಾಲಿಕ ಮಳೆ ಸಂಭವಿಸುತ್ತಿದೆ ಎಂಬುದು ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ. ವಾಡಿಕೆ ಮಳೆಗಿಂತ ಶೇ.317 ರಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿ 6 ಮಾನವ ಜೀವಹಾನಿ ಸಂಭವಿಸಿದೆ.
ಜಿಲ್ಲೆಯಲ್ಲಿ 2581 ಮನೆಗಳಿಗೆ ನೀರು ನುಗ್ಗಿ ಬಟ್ಟೆ ಬರೆ ಇತರೆ ಪಧಾರ್ಥಗಳು ಹಾನಿಯಾಗಿದೆ. ನಿಯಮದಂತೆ ಪ್ರತಿ ಮನೆಗೆ ತಲಾ 10 ಸಾವಿರ ಪರಿಹಾರ ನೀಡುವುದು ಬಾಕಿ ಇದೆ.
ಉಸ್ತುವಾರಿ ಕಾರ್ಯದರ್ಶಿ ಏನಂತಾರೆ?
ತೋಟಗಾರಿಕೆ ಪ್ರದೇಶಗಳ ಜಂಟಿ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂತ್ರಸ್ತ ರೈತರಿಗೆ ಪರಿಹಾರ ವಿತರಿಸಬೇಕು. ಜಂಟಿ ಸಮಿಕ್ಷೆ ಕೈಗೊಳ್ಳುವ ಕುರಿತು ಗ್ರಾಮಗಳಲ್ಲಿ ಮುಂಚಿತವಾಗಿ ಡಂಗುರ ಸಾರುವ ಮೂಲಕ ರೈತರಿಗೆ ತಿಳಿ ಹೇಳಬೇಕು. ಅತಿವೃಷ್ಟಿಯಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಾರ್ವಜನಿಕರ ಸಹಾಯಕ್ಕೆ ತ್ವರಿತವಾಗಿ ಸ್ಪಂದಿಸುವ ಕಾರ್ಯ ಮಾಡಬೇಕು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಶಿನ್.
ಪಿ.ಡಿ. ಖಾತೆಯಲ್ಲಿ ೨೯ ಕೋಟಿ ರೂ. ಲಭ್ಯ
ಅತಿವೃಷ್ಟಿ ನಿರ್ವಹಣೆಗಾಗಿ ಪಿ.ಡಿ. ಖಾತೆಯಲ್ಲಿ 29 ಕೋಟಿ ರೂ. ಲಭ್ಯವಿದೆ. ಅಗತ್ಯಕ್ಕನುಸಾರ ಬಳಸಲಾಗುವುದು. ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಕುಡಿಯುವ ನೀರಿಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಶೀಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸವಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ.
ಜಿಲ್ಲೆಯಲ್ಲಿ ಏನೆಲ್ಲ ಹಾನಿ ಸಂಭವಿಸಿದೆ?
-1.70 ಲಕ್ಷ ಹೆಕ್ಟೇರ್ ಬೆಳೆ ನಾಶ. ಹಾನಿ ಮೌಲ್ಯ 119 ಕೋಟಿ
– 1685.35 ಕಿಲೋ ಮೀಟರ್ ರಸ್ತೆ ಹಾನಿ. ಹಾನಿ ಮೌಲ್ಯ 170.53 ಕೋಟಿ
– 204 ಸೇತುವೆಗಳಿಗೆ ಹಾನಿ. ಹಾನಿ ಮೌಲ್ಯ ಅಂದಾಜು 60.85 ಕೋಟಿ.
-1458 ವಿದ್ಯುತ್ ಕಂಬಗಳು ಜಖಂ. 2.20 ಕೋಟಿ ನಷ್ಟ. 19 ಲಕ್ಷ ಮೌಲ್ಯದ 16 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ.
-ಸಣ್ಣ ನೀರಾವರಿ ಇಲಾಖೆಗಳ 6 ಕೋಟಿ ಮೌಲ್ಯದ 18 ಕಾಮಗಾರಿಗಳಿಗೆ ಹಾನಿ.
-204 ಅಂಗನವಾಡಿ ಕೊಠಡಿಗಳಿಗೆ ಹಾನಿ. 4.8 ಕೋಟಿ ನಷ್ಟ.
– 174 ಶಾಲಾ ಕೊಠಡಿಗಳು – ಹಾನಿ ಮೌಲ್ಯ 5.60 ಕೋಟಿ
– 3 ಬೋರವೆಲ್ ಗಳ ಹಾನಿ. 20 ಲಕ್ಷ ನಷ್ಟ.
– 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು – ಹಾನಿ ಮೌಲ್ಯ 20 ಲಕ್ಷ.
-‘ಎ’ ಕೆಟಗೇರಿ 3, ‘ಬಿ’ ಕೆಟಗೇರಿ 12 ಹಾಗೂ ‘ಸಿ’ ಕೆಟಗೇರಿಯ 2938 ಮನೆಗಳು ಹಾನಿ
ಯಾರಿಗೆ ಎಷ್ಟೆಷ್ಟು ಪರಿಹಾರ ನೀಡಲಾಗಿದೆ?
– ಕೃಷಿ ಇಲಾಖೆಗೆ ಎರಡನೇ ಹಂತದಲ್ಲಿ 43 ಕೋಟಿ ಪರಿಹಾರ.
– 6 ಪ್ರಾಣ ಹಾನಿಗೆ ತಲಾ 5 ಲಕ್ಷದಂತೆ ಪರಿಹಾರ.
-59 ಜಾನುವಾರು ಜೀವಹಾನಿಯಾಗಿದ್ದು 3.64ಲಕ್ಷ ರೂ. ಪರಿಹಾರ
– ಹಾನಿಗೊಂಡ 2938 ಮನೆಗಳ ಪೈಕಿ 732 ಮನೆಗಳಿಗೆ 3.66 ಕೋಟಿ.
ಇದನ್ನೂ ಓದಿ | Rain News | ಜೀವ ಹೋಗುತ್ತಿದೆ ಎಂದರೂ ರಸ್ತೆಗಿಳಿಯದ ವಾಹನ; ರಕ್ತದೊತ್ತಡದಿಂದ ಹೊಲದಲ್ಲೇ ಪ್ರಾಣಬಿಟ್ಟ ರೈತ