Site icon Vistara News

Rain News : ಮಳೆ ಆರ್ಭಟಕ್ಕೆ ನಲುಗಿದ ಮುಕ್ಕಾಲು ಕರ್ನಾಟಕ; ಇಬ್ಬರ ಸಾವು!

kedila kantukodi brigde in bantwal

ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ಮಳೆ ಇಲ್ಲ.. ಮಳೆ (Rain News) ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಹಲವು ಕಡೆ ನೀರಿಗಾಗಿ ಹಾಹಾಕಾರ ಎದುರಾಗಿದೆ ಎಂದೂ ಹೇಳಲಾಗುತ್ತಿತ್ತು. ಆದರೆ, ಈಗ ಕಳೆದ ಎರಡು-ಮೂರು ದಿನಗಳಿಂದೀಚೆಗೆ ರಾಜ್ಯದ ಬಹುತೇಕ ಕಡೆ ವರುಣನ ಆರ್ಭಟ ಶುರುವಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಅಕ್ಷರಶಃ ಥಂಡಿಯಲ್ಲಿ ಥಂಡಾ ಹೊಡೆದು ಹೋಗಿದೆ. ಜೀವನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ತುಂಗಾ, ಭದ್ರಾ ಆರ್ಭಟಕ್ಕೆ ದೇಗುಲಗಳು, ಸೇತುವೆಗಳು ಮುಳುಗಡೆಯಾಗಿವೆ. ಇನ್ನು ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕಲಬುರಗಿಯಲ್ಲಿ ತಗ್ಗು ಗುಂಡಿಗೆ ಬಿದ್ದು ಬಾಲಕಿರಿಬ್ಬರು ದುರ್ಮರಣ ಹೊಂದಿದ್ದಾರೆ.

ರಾಜ್ಯದ ಹಲವು ಕಡೆ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಆಸ್ತಿ-ಪಾಸ್ತಿಗಳಿಗೆ ನಷ್ಟವಾಗಿವೆ. ಜನಜೀವನ ಅಸ್ತವ್ಯಸ್ತವಾಗಿವೆ. ಪ್ರವಾಹದಲ್ಲಿ ಕೆಲವರು ಸಿಲುಕಿದ್ದಾರೆ. ಅವರನ್ನೆಲ್ಲ ಬೋಟ್‌ ಮೂಲಕ ರಕ್ಷಣೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಲುಗಿದ ಜನ

ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಗೆ (costal rain) ಉತ್ತರ ಕನ್ನಡ ಜನರು ನಲುಗಿ ಹೋಗಿದ್ದಾರೆ. ಬಿರುಗಾಳಿ ಸಹಿತ ಭಾರಿ ಮಳೆ ಒಂದು ಕಡೆಯಾದರೆ, ಮಳೆಯಿಂದ ಆಗುತ್ತಿರುವ ಹಾನಿಯಿಂದ ಹೊರಬರಲು ಆಗದೇ ಜನರು ವಿಲವಿಲನೆ ಒದ್ದಾಡುವಂತೆ ಮಾಡಿದೆ. ವ್ಯಾಪಕ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿನ ರಸ್ತೆಗಳು ಪ್ರವಾಹಕ್ಕೆ ಸಿಲುಕಿವೆ. ಜೋಯಿಡಾದಲ್ಲಿ ಸೇತುವೆ ಮುಳುಗಡೆಯಾದ ಪರಿಣಾಮ ಜನರನ್ನು ಬೋಟ್‌ ಮೂಲಕ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: NICE Road : ʼನೈಸ್ʼ ಕರ್ಮಕಥೆ ಪಾರಾಯಣ ಮಾಡಿ; ಸಿಎಂ ಸಿದ್ದರಾಮಯ್ಯ ಏಟಿಗೆ ಎಚ್‌ಡಿಕೆ ಎದುರೇಟು!

ಕಾತೇಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪರ್ ಕನೇರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದ ಪರಿಣಾಮ ಹಿನ್ನೀರಿನ ಪ್ರದೇಶದಲ್ಲಿರುವ ಕುಂಡಲ್ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಗ್ರಾಮದ ಜನರು ಹೊರಬರಲು ಸಾಧ್ಯವಾಗದೇ ಪರದಾಡುವಂತಾಗಿದೆ. ತಾಲೂಕಾಡಳಿತದಿಂದ ನೀಡಲಾಗಿದ್ದ ಬೋಟ್‌ ಸಹಾಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ರೋಗಿಗಳು ಸೇರಿದಂತೆ ಹಲವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಜಲಾಶಯ ಭರ್ತಿಯಾದ ಹಿನ್ನೆಲೆ ಹಿನ್ನೀರಿನ ಪ್ರದೇಶದಲ್ಲಿರುವ ಕುಂಡಲ್, ಕುರಾವಲಿ, ನವರ, ಆಂಬಾಳ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಂತಾಗಿದೆ‌.

ಗುಡ್ಡ ಕುಸಿತ

ಜೋಯಿಡಾ ರಸ್ತೆಯಲ್ಲಿ ಗುಡ್ಡ ಕುಸಿತ

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಣಶಿ ಘಟ್ಟದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಪಕ್ಕದಲ್ಲೇ ಗುಡ್ಡ ಕುಸಿದಿದೆ. ಜೋಯಿಡಾ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿತದಿಂದಾಗಿ ಜನರಲ್ಲಿ ಆತಂಕ ಹೆಚ್ಚಿದೆ. ಕಾರವಾರದಿಂದ ಜೋಯಿಡಾ, ದಾಂಡೇಲಿ, ಹಳಿಯಾಳ, ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದಾಗಿದೆ. ಭಾರೀ ಮಳೆಗೆ ರಸ್ತೆಗೆ ಧರೆಯ ಕಲ್ಲುಗಳು ಬಿದ್ದಿವೆ. ಕಳೆದ ಬಾರಿ ಅಣಶಿ ಘಟ್ಟದಲ್ಲಿ ಭೂಕುಸಿತದಿಂದ ತಿಂಗಳ ಕಾಲ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಮತ್ತೆ ಗುಡ್ಡ ಕುಸಿತ ಉಂಟಾಗುತ್ತಿರುವುದಕ್ಕೆ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವ ಆತಂಕ ಇದೆ.

ಇತ್ತ ಕುಮಟಾದ ಉಪ್ಪಿನ ಗಣಪತಿ ದೇವಸ್ಥಾನ ಬಳಿ ಭಾರೀ ಗಾಳಿ ಮಳೆಗೆ ಮನೆ ಮೇಲೆ ಆಲದ ಮರವೊಂದು ಉರುಳಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗಾಧರ ಗೌಡ ಹಾಗೂ ಗಣೇಶ ಗೌಡ ಎಂಬುವವರ ಮನೆ ಮೇಲೆ ಬೃಹತ್ ಆಲದ ಮರ ಬಿದ್ದಿದೆ. ಗಣೇಶ ಗೌಡ ಅವರ ಮನೆ ಭಾಗಶಃ ಹಾನಿ ಆಗಿದೆ. ಮರ‌ ಬಿದ್ದ ಸ್ಥಳಕ್ಕೆ ಕಂದಾಯ ‌ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಉದುರಿ ಬೀಳುತ್ತಿರುವ ದಾಳಿಂಬೆ

ವಿಜಯನಗರ ಜಿಲ್ಲೆಯಲ್ಲಿ ನಿರಂತರ ಜಿಟಿಜಿಟಿ ಮಳೆಯಿಂದಾಗಿ ದಾಳಿಂಬೆ ಬೆಳೆಗಾರರ ಬದುಕು ಹೈರಾಣಾಗಿದೆ. ನಿರಂತರ ಮಳೆಗೆ ಗಿಡದಲ್ಲಿ ಹಣ್ಣಾಗದೇ ದಾಳಿಂಬೆ ಉದುರಿ ಬೀಳುತ್ತಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಸುನೀಲ್ ಸೇರಿ ಹತ್ತಾರು ದಾಳಿಂಬೆ ಬೆಳೆಗಾರರ ಸ್ಥಿತಿ ಹೇಳತೀರದಾಗಿದೆ. ಬಿಟ್ಟುಬಿಡದೆ ಬರುತ್ತಿರುವ ಮಳೆಯಿಂದಾಗಿ ದಾಳಿಂಬೆ ಬಿರುಕು ಬಿಡುತ್ತಿವೆ. ಕೈಗೆ ಬಂದ ತುತ್ತು ಮಳೆಯಿಂದಾಗಿ ಬಾಯಿಗೆ ಬಾರದ ರೀತಿ ಆಗಿದೆ.

ಶಿವಮೊಗ್ಗದ ಕೋರ್ಪಲಯ್ಯ ಛತ್ರ ಬಹುಭಾಗ ಮುಳುಗಡೆ

ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ತುಂಗಾ ಜಲಾಶಯದ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಜಲಾಶಯದ 21 ಗೇಟುಗಳನ್ನು ತೆರೆಯಲಾಗಿದೆ. ಭಾರಿ ಮಳೆಗೆ ನಗರದ ಕೋರ್ಪಲಯ್ಯ ಛತ್ರ ಬಹುಭಾಗ ಮುಳುಗಡೆ ಆಗಿದೆ. ಇನ್ನೊಂದು ಅಡಿಯಷ್ಟು ನೀರು ಏರಿಕೆಯಾದರೆ ಮಂಟಪ ಜಲಾವೃತಗೊಳ್ಳಲಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನದ ಘಟ್ಟ

ದಕ್ಷಿಣ ಕನ್ನಡದ ಭರ್ಜರಿ ಮಳೆ; ನೇತ್ರಾವತಿ ನದಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಧರ್ಮಸ್ಥಳದ ನೇತ್ರಾವತಿ ನದಿಯು ಭೋರ್ಗರೆದು ಹರಿಯುತ್ತಿದೆ. ನದಿ ನೀರಿನ ಮಟ್ಟ ಏರಿಕೆ ಹಿನ್ನೆಲೆ ನೇತ್ರಾವತಿ ಸ್ನಾನ ಘಟ್ಟ ಮುಳುಗಡೆಯಾಗುವ ಭೀತಿ ಇದೆ. ಈಗಾಗಲೇ ಭಕ್ತರಿಗೆ ನದಿಗಿಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ವಾರಾಂತ್ಯ ಹಿನ್ನೆಲೆ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ನದಿಗಿಳಿಯದಂತೆ ಎಚ್ಚರಿಕೆ ಇದ್ದರೂ ಯಾತ್ರಿಗಳು ಉದಾಸೀನ ತೋರುತ್ತಿದ್ದಾರೆ.

ಇತ್ತ ಕಡಬ ಪಂಜ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವು ಸ್ಥಗಿತಗೊಂಡಿದೆ. ಪುಳಿಕುಕ್ಕು ಎಂಬಲ್ಲಿ ರಸ್ತೆಗೆ ನೆರೆನೀರು ಹರಿದು ಬಂದಿದೆ. ಸುಳ್ಯ ತಾಲೂಕಿಗೆ ಸಂಚರಿಸಲು ಬದಲಿ ಮಾರ್ಗ ಎಡಮಂಗಲ ಮೂಲಕ ತೆರಳಲು ತಹಸೀಲ್ದಾರ್ ಮನವಿ ಮಾಡಿದ್ದಾರೆ. ಜತೆಗೆ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟವು ಮುಳುಗಡೆ ಆಗಿದೆ.

ಧಾರವಾಡದ ಅಂಬಲಿಕೊಪ್ಪ ಸೇತುವೆ ಮುಳುಗಡೆ

ಧಾರವಾಡದಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿದೆ. ಅಂಬಲಿಕೊಪ್ಪ ಬಳಿಯ ಸೇತುವೆ ಮುಳುಗಡೆಯಾಗಿದ್ದು, ಇದರಿಂದಾಗಿ ಅಂಬಲಿಕೊಪ್ಪ-ಡೊಂಬರಿಕೊಪ್ಪ‌ ಸಂಚಾರ ಬಂದ್ ಆಗಿದೆ. ಸಂಚಾರ ಬಂದ್ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ಇದನ್ನೂ ಓದಿ: Lok Sabha Election 2024 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ!

ಬೆಳಗಾವಿಯೂ ತತ್ತರ; ಮಳೆಗೆ ಮನೆಗಳು ನೆಲಸಮ

ಬೆಳಗಾವಿಯಲ್ಲಿ ನಿರಂತರ ಮಳೆಗೆ ಎರಡು ಮನೆಗಳ ಗೋಡೆಗಳು ಬಿದ್ದಿವೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಖೈರುನ್ನಿಸಾ ಹಿರೇಕೆರ್ ಮತ್ತು ಗೋಪಾಲ ತಾರೋಡಕರ್ ಎಂಬುವವರಿಗೆ ಸೇರಿದ ಮನೆಗಳು ಮಳೆಗೆ ನೆನೆದು ಗೋಡೆಗಳು ನೆಲಸಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದೂಧ್‌ಗಂಗಾ ನಂದಿ ಮೈದುಂಬಿ ಹರಿಯುತ್ತಿದೆ. ದೂಧ್‌ಗಂಗಾ ದಡದಲ್ಲಿದ್ದ ಮನ್ಸೂರ್‌ಅಲಿ ದರ್ಗಾ ಸಂಪೂರ್ಣ ಮುಳುಗಡೆಯಾಗಿದೆ. ಯಕ್ಸಂಬಾ ಪಟ್ಟಣದ ಮುಲ್ಲಾನ್ಕಿ ತೋಟದಲ್ಲಿರುವ ಮನ್ಸೂರ್ ಅಲಿ ದರ್ಗಾ ಕೆರೆಯಂತಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಬಂಗಾಳಿ ಬಾಬಾ ಧಾರ್ಮಿಕ ಕೇಂದ್ರ/ ದರ್ಗಾ ನಡುಗಡ್ಡೆಯಾಗಿ ಪರಿವರ್ತನೆ ಆಗಿದೆ. ಬಂಗಾಳಿ ಬಾಬಾ ಧಾರ್ಮಿಕ ಕೇಂದ್ರಕ್ಕೆ ನೀರು ಆವರಿಸಿದ ಹಿನ್ನೆಲೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಹಾವೇರಿಯಲ್ಲಿ ತುಂಬಿ ಹರಿದ ವರದಾ ನದಿ

ಇತ್ತ ಹಾವೇರಿ ಜಿಲ್ಲೆಯಲ್ಲೂ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ವರದಾ ನದಿ ತುಂಬಿ ಹರಿಯುತ್ತಿದೆ. ಹಾವೇರಿ- ಕಳಸೂರು ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ. ಅಪಾಯದ ಮಟ್ಟ ಮೀರಿ ವರದಾ ನದಿ ನೀರು ಹರಿಯುತ್ತಿದೆ.

ವರುಣಬ್ಬರಕ್ಕೆ ನಲುಗಿದ ಚಿಕ್ಕಮಗಳೂರು

ಚಿಕ್ಕಮಗಳೂರಲ್ಲಿ (chikkamangaluru News) ಸತತ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯಿಂದ ಹೊರಗೆ ಬರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಗಾಳಿ-ಮಳೆಗೆ (Rain News) ಮರಗಳು ಉರುಳಿವೆ, ಜತೆಗೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆ ಆಗಿದೆ. ಕೆಲ ತೋಟಗಳಲೂ ನಾಶವಾಗಿವೆ.

ಹೆಬ್ಬಾಳೆ ಸೇತುವೆ ಮುಳುಗಡೆ

ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಸತತ ಮಳೆಗೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ ಆಗಿದೆ. ಇದರಿಂದಾಗಿ ಕಳಸ-ಹೊರನಾಡು ಸಂಪರ್ಕ ಬಂದ್ ಆಗಿದೆ. ಸಂಪರ್ಕ ಕಳೆದುಕೊಂಡ ಹತ್ತಾರು ಹಳ್ಳಿಯ ಜನರು, ಅನ್ಯ ಮಾರ್ಗವಿದ್ದರೂ 8-10 ಕಿ.ಮೀ ಸುತ್ತಿಕೊಂಡು ಬರಬೇಕಾಗಿದೆ.

ಸೇತುವೆ ಮುಳುಗಡೆ

ರಸ್ತೆಗೆ ಉರುಳಿದ ಬೃಹತ್‌ ಮರ

ಗಾಳಿ- ಮಳೆ ಅಬ್ಬರಕ್ಕೆ ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ಘಟನೆ ನಡೆದಿದ್ದು, ಕಡೂರು-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಮರ ತೆರವು ಆಗದೆ ಇರುವುದರಿಂದ ರಸ್ತೆಯಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತದಿಂದಾಗಿ ಸವಾರರು ಆಲ್ದೂರು ಮೂಲಕ ಮೂಡಿಗೆರೆ, ಮಂಗಳೂರಿಗೆ ಹೋಗುತ್ತಿದ್ದಾರೆ. ಸುಮಾರು 20 ಕಿ.ಮೀ ಹೆಚ್ಚುವರಿಯಾಗಿ ಸುತ್ತಿಕೊಂಡು ಹೋಗುವಂತಾಗಿದೆ.

ಇದನ್ನೂ ಓದಿ: BK Hariprasad : ಸಿಎಂ ಇಳಿಸುವ ಮಾತು ಹರಿಪ್ರಸಾದ್‌ರದ್ದೋ, ಡಿಕೆಶಿಯದ್ದೋ? ಮಾಳವೀಯ ಪ್ರಶ್ನೆ

ಅಡಿಕೆ ಮರಗಳು ನಾಶ

ಕೊಪ್ಪ ತಾಲೂಕಿನ ಕುಂಚೂರು ಕಂಚಿನರಸಳಿ ಗ್ರಾಮದಲ್ಲಿ ಮರ ಬಿದ್ದು ಐವತ್ತಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿವೆ. ಗ್ರಾಮದ ನಾಗೇಶ್ ಎಂಬುವರ ತೋಟದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಎರಡು ದಿನದ ಹಿಂದೆಯಷ್ಟೇ ಇದೇ ತೋಟದ ಮೇಲೆ ಬೃಹತ್ ಮರ ಬಿದ್ದಿತ್ತು. ಇದೀಗ ಮತ್ತೊಂದು ಮರ ಬಿದ್ದು ಅಡಿಕೆ ಮರಗಳು ನಾಶವಾಗಿದೆ.

ಇದನ್ನೂ ಓದಿ: Rain News : ಮಳೆ ನೀರಿನಿಂದ ಭರ್ತಿಯಾಗಿದ್ದ ತಗ್ಗು ಗುಂಡಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಕುದುರೆಮುಖದಲ್ಲಿ ಭಾರಿ ಮಳೆ

ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದೆ. ಜತೆಗೆ ತುಂಗಾ, ಹೇಮಾವತಿ ನದಿಗಳ ಒಳಹರಿವಿನಲ್ಲೂ ಹೆಚ್ಚಳವಾಗಿದೆ. ಭಾರೀ ಗಾಳಿ-ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳಸ-ಕುದುರೆಮುಖ-ಮಂಗಳೂರು ರಸ್ತೆಯಲ್ಲಿರುವ ಜಾಂಬಳೆ ಸಮೀಪ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ನೀರಿನ ನಡುವೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂದಿದೆ.

ಸೇತುವೆ ಮುಳುಗಡೆ

ಭಾರಿ ಮಳೆಗೆ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದೆ. ಪಟ್ಟಣದ ಪ್ಯಾರಲಾಲ್ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆ ಆಗಿದೆ. ಇತ್ತ ಶೃಂಗೇರಿ ದೇವಾಲಯದ ಗಾಂಧಿ ಮೈದಾನದ ಅಂಗಡಿ ಮಳಿಗೆಗಳನ್ನು ಮುನ್ನೆಚ್ಚರಿಕೆಯಾಗಿ ಬಂದ್‌ ಮಾಡಲಾಗಿದೆ. ಇತ್ತ ನದಿಯ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಕ್ಷಣ ಕ್ಷಣಕ್ಕೂ ತುಂಗಾ ನದಿಯ ನೀರಿನ ಮಟ್ಟ ಏರಿಕೆ ಆಗುತ್ತಿರುವುದು ಜನರು ಆತಂಕದಲ್ಲೇ ದಿನದೂಡುವಂತಾಗಿದೆ.

ಮುಳುಗಡೆಯಾದ ಹಲವು ಗ್ರಾಮಗಳು

ಮಳೆ ಹಾನಿ ಪ್ರದೇಶಗಳಿಗೆ ಕೆ.ಜೆ ಜಾರ್ಜ್‌ ಭೇಟಿ

ಚಿಕ್ಕಮಗಳೂರು ಜಿಲ್ಲೆ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂಕುಸಿತ ಹಾಗೂ ಮಳೆ ಹಾನಿ ಕುರಿತು ಸಚಿವರು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ವರದಿ ಪಡೆದಿದ್ದಾರೆ. ಬಿರುಕು ಬಿಟ್ಟ ಅಪಾಯದ ಸ್ಥಿತಿಯ ಸೇತುವೆಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕಲಬುರಗಿಯಲ್ಲಿ ಬಾಲಕರಿಬ್ಬರ ದುರ್ಮರಣ

ತಗ್ಗು ಗುಂಡಿಯಲ್ಲಿ‌ ನಿಂತಿದ್ದ ಮಳೆ‌ ನೀರಲ್ಲಿ ಬಿದ್ದು ಬಾಲಕರಿಬ್ಬರು ದುರ್ಮರಣ ಹೊಂದಿದ್ದಾರೆ. ಅಭಿ (11), ಅಜಯ್ (12) ಮೃತ ದುರ್ದೈವಿಗಳು. ಕಲಬುರಗಿ ನಗರದ ದುಬೈ ಕಾಲೋನಿಯ ಕಲಬುರಗಿ ‌ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ನಡೆದಿದೆ.

ಅಭಿ ಹಾಗೂ ಅಜಯ್‌ ಮೃತ ದುರ್ದೈವಿಗಳು

ಮಂಟಪದ ಬಳಿ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಇದಕ್ಕಾಗಿ ನೀರಿನ ಟ್ಯಾಂಕ್ ಸುತ್ತಮುತ್ತ 15 ಅಡಿ ಗುಂಡಿ ತೋಡಲಾಗಿತ್ತು. ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ಇದರ ಅರಿವು ಇರದ ಅಭಿ ಹಾಗೂ ಅಜಯ್‌ ಗುಂಡಿ ಬಳಿ ಬಂದಿದ್ದಾರೆ. ಈ ವೇಳೆ ಕಾಲು ಜಾರಿ ಗುಂಡಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಈ ಇಬ್ಬರು ಬಾಲಕರು ನಾಪತ್ತೆ ಆಗಿದ್ದರು. ಪೋಷಕರು ರಾತ್ರಿಯಿಡಿ ಹುಡುಕಾಡಿದರೂ ಬಾಲಕರ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ ಭಾನುವಾರ ಬೆಳಗ್ಗೆ ಗುಂಡಿಯಲ್ಲಿ ಓರ್ವ ಬಾಲಕನ ಮೃತದೇಹವು ಪತ್ತೆ ಆಗಿದ್ದು ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Jog Falls : ಮೈದುಂಬಿದ ಜೋಗ; ಮುಸುಕಿದ ಮಬ್ಬಿನಲಿ ಕಾಣದ ವೈಭೋಗ!

ಮಳೆಗೆ ನಲುಗಿದ ಕೊಡಗು

ಕೊಡಗಿನಲ್ಲಿ ಗಾಳಿ, ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಗಾಳಿಯ ರಭಸಕ್ಕೆ ಮರಗಳು ಹಾಗೂ ಲೈಟ್ ಕಂಬಗಳು ಧರೆಗೆ ಉರುಳಿವೆ. ಸುಂಟ್ಟಿಕೊಪ್ಪದ ಪನ್ಯ ಬಳಿ ರಸ್ತೆಗೆ ಅಡ್ಡಲಾಗಿ ಮರ ಹಾಗೂ ಲೈಟ್ ಕಂಬಗಳು ಬಿದ್ದಿವೆ. ಸುಂಟಿಕೊಪ್ಪ ಮಾದಾಪುರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಮಳೆಯ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳ ಮೇಲೂ ಮರಗಳು ಮುರಿದು ಬಿದ್ದಿರುವುದನ್ನು ಈಗ ಕಾಣಬಹುದು.

ಕೊಡಗಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕೆಲವು ಕುಗ್ರಾಮಗಳು ಕಗ್ಗತ್ತಲಿನಲ್ಲಿ ಮುಳುಗಿವೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಶನಿವಾರದಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. 10000 ಕ್ಯೂಸೆಕ್‌ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಮಂಡ್ಯದ ಕೆಆರ್‌ಎಸ್‌ ಅಣೆಕಟ್ಟೆಯಿಂದಲೂ ನೀರು ಬಿಡುಗಡೆ ಮಾಡಲಾಗಿದೆ.

ಹಾರಂಗಿ ಜಲಾಶಯದ ಗರಿಷ್ಠ ಸ್ಟೋರೇಜ್‌ ಸಾಮರ್ಥ್ಯ 2,859 ಅಡಿಗಳಾಗಿದೆ. ಈಗಾಗಲೇ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 2853 ಅಡಿಗೆ ಏರಿಕೆಯಾಗಿದೆ. ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ಶನಿವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ತುಂಬಿ‌ ಹರಿಯುತ್ತಿದೆ. ಕಾವೇರಿ ತ್ರಿವೇಣಿ ಸಂಗಮದ ಸ್ಥಾನ ಘಟಕ 2 ಮುಳುಗಡೆಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ 2 ಬಾರಿಗೆ ಜಲಾವೃತವಾಗಿದೆ. ರಸ್ತೆ ಮೇಲೆ 1 ಅಡಿ ನೀರು ಹರಿಯುತ್ತಿದೆ. ಭಾರಿ ಗಾತ್ರದ ವಾಹನ ಸಂಚಾರಕ್ಕೆ ಮಾತ್ರ ರಸ್ತೆಯಲ್ಲಿ‌ ಅವಕಾಶ ಕಲ್ಪಿಸಲಾಗಿದೆ.

ಮಳೆ ಹೀಗೆಯೇ ಮುಂದುವರಿದಲ್ಲಿ ಮಡಿಕೇರಿ ನಾಪೋಕ್ಲು ರಸ್ತೆ ಮೇಲು ನೀರು ತುಂಬುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಕಳೆದ ಒಂದು ತಿಂಗಳಿಂದ ಭಾಗಮಂಡಲದಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಹೇಮಾವತಿ ಜಲಾಶಯ: ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಜಲಾಶಯಕ್ಕೆ 12088 ಕ್ಯೂಸೆಕ್ ನೀರು ಹರಿದು ಬರುತ್ತಿವೆ. ಒಟ್ಟು ಜಲಾಶಯದ ಗರಿಷ್ಠ ಮಟ್ಟ – 2922 ಅಡಿಗಳಾಗಿದೆ. ಡ್ಯಾಂನ ಗರಿಷ್ಠ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ ಇದೆ. ಸದ್ಯ 200 ಕ್ಯೂಸೆಕ್ ನಷ್ಟು ನೀರನ್ನು ನದಿಯಿಂದ ಹೊರಬಿಡಲಾಗಿದೆ.

ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ ಜೋರಾಗಿದ್ದು, ಇನ್ನೆರಡು ದಿನಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಸೇರಿದಂತೆ ಶಾಲಾ‌ ಕಾಲೇಜುಗಳಿಗೆ ಜು.24ರಂದು ರಜೆ ಘೋಷಣೆ ಮಾಡಲಾಗಿದೆ. ಕೊಡಗಿನಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯಲ್ಲೂ ರಜೆ

ಬೆಳಗಾವಿಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಮೂರು ತಾಲೂಕುಗಳಿಗೆ ಸೋಮವಾರ (ಜು.24) ರಜೆ ಘೋಷಣೆ ಮಾಡಲಾಗಿದೆ. ಖಾನಾಪುರ, ಬೆಳಗಾವಿ, ಕಿತ್ತೂರ ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.

ಉತ್ತರ ಕನ್ನಡದಲ್ಲೂ ಶಾಲಾ-ಕಾಲೇಜುಗಳಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಲಾಗಿದೆ. ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಘಟ್ಟದ ಮೇಲಿರುವ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ಶಾಲಾ- ಕಾಲೇಜಿಗೆ ರಜೆ ನೀಡಲಾಗಿದೆ. ಹೊನ್ನಾವರ ವ್ಯಾಪ್ತಿಯ ಗುಂಡಬಾಳ ನದಿ, ಭಾಸ್ಕೇರಿ ಹೊಳೆ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಅಂಗನವಾಡಿ ಹಾಗೂ ಶಾಲೆ ಸೇರಿ ಪಿಯು ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಆದೇಶವನ್ನು ಹೊರಡಿಸಿದ್ದಾರೆ.

ಮಳೆಗೆ ಮನೆ ಕುಸಿದು ಮೃತಪಟ್ಟ ಜಾನುವಾರುಗಳು

ನಿರಂತರ ಮಳೆಗೆ ಕುಸಿದ ಚಾವಣಿ; ಜಾನುವಾರುಗಳು ಸಾವು

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ನಿರಂತರ ಮಳೆಗೆ ಚಾವಣಿ ಕುಸಿದು ಜಾನುವಾರುಗಳು ದಾರುಣವಾಗಿ ಮೃತಪಟ್ಟಿವೆ. ಬಣಕಾರ ಪಾರ್ವತಮ್ಮ ಎಂಬುವವರ ಮನೆಯ ಹಿಂಭಾಗ ಕುಸಿದು, ಒಂದು ಎಮ್ಮೆ, ಮೂರು ಆಡು ಮಣ್ಣಲ್ಲಿ ಸಿಲುಕಿ ಮೃತಪಟ್ಟಿವೆ. ಇತ್ತ ಮಣ್ಣಿನಲ್ಲಿ ಸಿಲುಕಿದ್ದ ಹಿರೆಯಮ್ಮ ಎಂಬ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕಾಲು ಮುರಿದು ಗಾಯಗೊಂಡಿರುವ ಮಹಿಳೆಯನ್ನು ಹಾವೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: Weather Report : ಈ ವಾರ ಪೂರ್ತಿ ಮಳೆಯೋ ಮಳೆ!

ಯುಟಿಪಿ ಕಾಲುವೆ ಒಡೆದು ಅನಾಹುತ

ಹಾವೇರಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ರಾಣೇಬೆನ್ನೂರು ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ಬಳಿ ಯುಟಿಪಿ ಕಾಲುವೆ ಒಡೆದಿದೆ. ಕಾಲುವೆ ಒಡೆದು ನೀರು ಹರಿಯುತ್ತಿದ್ದು ಹೊಲಕ್ಕೆ ನೀರು ನುಗ್ಗುವ ಭೀತಿ ಇದೆ. ಬಿಲ್ಲಹಳ್ಳಿ, ಹಾರೋಗೊಪ್ಪ, ದಂಡಿಗೆಹಳ್ಳಿ, ಗ್ರಾಮದ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಸೇತುವೆಯಲ್ಲಿ ಸಿಲುಕಿದ ಪಿಕಪ್ ವಾಹನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಭಾರೀ ಮಳೆಗೆ ಸೇತುವೆ ಮುಳುಗಡೆ ಆಗಿದೆ. ಕೆದಿಲ ಕಾಂತುಕೋಡಿ ಸೇತುವೆಯಲ್ಲಿ ಪಿಕಪ್ ವಾಹನವೊಂದು ಸಿಲುಕಿಕೊಂಡಿತ್ತು. ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕ ತಮ್ಮ ವಾಹನವನ್ನು‌ ಚಲಾಯಿಸಿಕೊಂಡು ಬಂದಿದ್ದರು. ನೀರು ಹೆಚ್ಚಾಗಿ ಸೇತುವೆಯ ಮಧ್ಯದಲ್ಲಿ ವಾಹನ ಸಿಲುಕಿಕೊಂಡಿತ್ತು. ತಕ್ಷಣ ಸ್ಥಳೀಯರು ವಾಹನದಲ್ಲಿ ಸಿಲುಕಿದವವರನ್ನು ರಕ್ಷಣೆ ಮಾಡಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣದಿಂದ ಕುಕ್ಕೆಯಲ್ಲಿ ಹರಿಯುವ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ತೀರ್ಥಸ್ನಾನ ಮಾಡುವ ಸ್ನಾನ ಘಟ್ಟ ಸಂಪೂರ್ಣ ಜಲಾವೃತಗೊಂಡಿದ್ದು, ತೀರ್ಥಸ್ನಾನ ನಿಷೇಧಿಸಲಾಗಿದೆ. ಎಸ್​ಡಿಆರ್​ಎಫ್​ ತಂಡ ಸೇರಿದಂತೆ ಗೃಹರಕ್ಷಕ ದಳ ಹಾಗೂ ಪೊಲೀಸರು ಸ್ನಾನಘಟ್ಟದ ಬಳಿ ನಿಯೋಜಿಸಿಲಾಗಿದೆ. ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಪ್ರವಾಹದ ನೀರು ನುಗ್ಗಿ ಸಂಚಾರ ವ್ಯತ್ಯಯಗೊಂಡಿದೆ.

ಭಾರೀ ಮಳೆಗೆ ತತ್ತರಿಸಿದ ಪುಷ್ಪಗಿರಿ ಅರಣ್ಯದ ತಪ್ಪಲು

ಭಾರೀ ಮಳೆಗೆ ಕೊಡುಗು ವ್ಯಾಪ್ತಿಯ ಪುಷ್ಪಗಿರಿ ಅರಣ್ಯ ಪ್ರದೇಶ ತತ್ತರಿಸಿದೆ. ಮಳೆಯಿಂದಾಗಿ ಗೌರಿ ಹೊಳೆ ಅಪಾಯದ ಮಟ್ಟ ತಲುಪಿದೆ. ಕಲ್ಮಕಾರು, ಕೊಲ್ಲಮೊಗ್ರು ಹರಿಹರ ಪ್ರದೇಶದಲ್ಲಿ ಪ್ರವಾಹ ರೀತಿಯಲ್ಲಿ ಕೆಂಪು ಮಿಶ್ರಿತ ನೀರು ಹರಿಯುತ್ತಿದೆ. ಕಳೆದ ವರ್ಷ ಕಡಮಕಲ್ಲು ಎಸ್ಟೇಟ್ ಬಳಿ ಭೂ ಕುಸಿತದಿಂದ ನದಿಯಲ್ಲಿ ಮಣ್ಣು, ಮರ ಕೊಚ್ಚಿ ಬಂದಿತ್ತು. ಈ ವರ್ಷವೂ ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ.

ಪ್ರವಾಹ ಭೀತಿ ನಿವಾಸಿಗಳ ಸ್ಥಳಾಂತರ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಭಾಸ್ಕೇರಿ ಹಾಗೂ ಗುಂಡಬಾಳ ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣ ತೀರ‌ ಪ್ರದೇಶದ ನಿವಾಸಿಗಳಿಗೆ ನೆರೆ ಆತಂಕ ಎದುರಾಗಿದೆ. ಈಗಾಗಲೇ ಗುಂಡಬಾಳ, ಚಿಕ್ಕನಕೋಡು, ಹುಡಗೋಡು, ಹಡಿನ್‌ಬಾಳ ಭಾಗದ ಮನೆ ಹಾಗೂ ತೋಟಗಳಿಗೆ ನದಿ ನೀರು ನುಗ್ಗಿದೆ. ಗುಂಡಬಾಳ ಗ್ರಾಮದ ಎರಡು ಮನೆಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ರಾತ್ರಿ ವೇಳೆ ಪ್ರವಾಹ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಬೋಟುಗಳನ್ನು ಸಿದ್ಧಪಡಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ತಾಲೂಕಾಡಳಿತ ಹಾಗೂ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version