ಬೆಳಗಾವಿ: ಮಳೆ ನೀರಿಗೆ (Rain News) ಆ ಗ್ರಾಮದ ಮನೆಗಳೆಲ್ಲವೂ ಒಂದೊಂದಾಗಿ ಮುಳುಗಿ ಹೋಗುತ್ತಿದ್ದವು. ಭಾಗಶಃ ಗ್ರಾಮದ ಜನರು ತಮ್ಮ ನೆಲೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಈ ಮಧ್ಯೆ ಒಂದು ಕುಟುಂಬ ಮಾತ್ರ ಮನೆಯಿಂದ ಹೊರ ಬರಲು ಆಗದೆ ಪರದಾಡುತ್ತಿತ್ತು. 12 ದಿನದ ಹಸುಗೂಸನ್ನು ತಬ್ಬಿಕೊಂಡಿದ್ದ ಬಾಣಂತಿ ಜೀವವನ್ನು ಕೈನಲ್ಲಿ ಹಿಡಿದು ಕುಳಿತಿದ್ದರು.
ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಪ್ರಾಣದ ಹಂಗು ತೊರೆದು ಗ್ರಾಮದ ಯುವಕರು ಮಗುವನ್ನು ಹಾಗೂ ಹಸಿ ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ.
ಇಲ್ಲಿನ ಗೋಕಾಕ್ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಮಳೆ ನೀರಿನಿಂದ ಸುತ್ತುವರಿದಿದ್ದು, ವರುಣನ ಆರ್ಭಟಕ್ಕೆ ಸೊಂಟದವರೆಗೆ ನೀರು ನಿಂತು ಮನೆಗಳಿಂದ ಹೊರ ಬರಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಯದಂತ ಮಳೆಗೆ ಜನರು ನಲುಗಿ ಹೋಗಿದ್ದು, ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ಗ್ರಾಮವೇ ಪುಟ್ಟ ದ್ವೀಪವಾಗಿ ಪರಿವರ್ತನೆ ಆಗಿದೆ. ರಸ್ತೆಗಳು ಜಲಾವೃತವಾಗಿದ್ದರೆ, ಮನೆಗಳಿಗೆ ಏಕಾಏಕಿ ನೀರು ನುಗ್ಗಿದೆ. ನೀರಲ್ಲಿ ಸಿಲುಕಿದ್ದ ಮಗುವನ್ನು ಹಾಗೂ ಬಾಣಂತಿಯನ್ನು ಗ್ರಾಮದ ಯುವಕರು ಪಾರು ಮಾಡಿದ್ದಾರೆ. ಮನೆಯ ಮೇಲ್ಚಾವಣಿ ಏರಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಯುವಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮವಾರದ ರಣಭೀಕರ ಮಳೆಗೆ ಮಾಣಿಕವಾಡಿ ಗ್ರಾಮಸ್ಥರು ಕಂಗಾಲಾಗಿದ್ದು, 20ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಿದ್ದ ಕಾರಣಕ್ಕೆ ರಾತ್ರಿಯಿಡೀ ನೀರಿನಲ್ಲಿಯೇ ನಿವಾಸಿಗಳು ಕಾಲ ಕಳೆದಿದ್ದಾರೆ.
ಇದನ್ನೂ ಓದಿ | Rain News | ಗಣೇಶ ವಿಸರ್ಜನೆ ಭದ್ರತೆಗೆ ಹೋದ ಇಬ್ಬರು ಪೊಲೀಸರು ನಾಪತ್ತೆ, ಕೊಚ್ಚಿ ಹೋದ್ರಾ?