ಮಂಡ್ಯ: ಭಾರಿ ಮಳೆಯಿಂದಾಗಿ (Rain News) ಕಾವೇರಿ ಕೊಳ್ಳಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಶ್ರೀರಂಗಪಟ್ಟಣ ತಾಲೂಕಿನ ಬೆಳಗೋಳ ಸಮೀಪದ ಕಾವೇರಿ ನದಿಯ ನಡುಗಡ್ಡೆ ಭಾಗದಲ್ಲಿರುವ ಸರ್ವ ಧರ್ಮ ಆಶ್ರಮದಲ್ಲಿ 15 ಮಂದಿ ಉಳಿಯುವಂತಾಗಿದೆ.
ನದಿಯಲ್ಲಿ 85 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತವಾಗಿದೆ. ಇದರಿಂದ ಹೊರ ಬರಲಾಗದ ಆಂಧ್ರ ಮೂಲದ ನಾಲ್ವರು ಭಕ್ತರು ಸೇರಿ 15 ಮಂದಿ ನಡುಗಡ್ಡೆಯಲ್ಲೇ ಉಳಿಯುವಂತಾಗಿದೆ. ನಡುಗಡ್ಡೆಯಲ್ಲಿ ಸಿಲುಕಿರುವ ಜನರ ಜತೆ ಅಧಿಕಾರಿಗಳು ಫೋನ್ ಸಂಪರ್ಕದಲ್ಲಿದ್ದಾರೆ.
ಕರೆತರುತ್ತೇವೆಂದರೂ ಬರುತ್ತಿಲ್ಲ
ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಿ ಕರೆತರುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಸಹ ಅಲ್ಲಿರುವ ಜನ ಬರಲು ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ. ತಮಗೆ ಇಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ. ಎರಡು ತಿಂಗಳಿಗಾಗುವಷ್ಪು ಆಹಾರ ಪದಾರ್ಥಗಳ ದಾಸ್ತಾನಿದೆ. ನಡುಗಡ್ಡೆಯ ಜಮೀನಿನಲ್ಲಿ ಇದ್ದು, ಅಲ್ಲಿಯೇ ಇರಲು ಇಷ್ಟಪಡುತ್ತಿದ್ದಾರೆ.
ಅಲ್ಲದೆ, ನೀರಿನ ಮಟ್ಟ ಏರಿಕೆಯನ್ನು ಕಂಡು ಭಯಗೊಂಡಿರುವ ಜನರು, ನೀರು ಕಡಿಮೆ ಆಗುವವರೆಗೂ ಹೊರಗೆ ಬರುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಆದರೆ, ನದಿ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆಯಾದರೆ ಸರ್ವ ಧರ್ಮ ಆಶ್ರಮವು ಮುಳುಗಡೆ ಆಗುವ ಅಪಾಯ ಇದೆ. ಹೀಗಾಗಿ ಶ್ರೀರಂಗಪಟ್ಟಣ ತಾಲೂಕು ಆಡಳಿತಾಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಇರುವುದಲ್ಲದೆ, ನದಿ ನೀರಿನ ಮಟ್ಟದ ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದಾರೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದರೆ ಅವರನ್ನು ಸ್ಥಳಾಂತರ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಕೆಆರ್‌ಎಸ್ ಭರ್ತಿಗೆ ಒಂದೇ ಅಡಿ ಬಾಕಿ; ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ