ಬಳ್ಳಾರಿ: ಸಿರುಗುಪ್ಪ ತಾಲೂಕಿನ ಬಲಕುಂದಿ ಶನಿ ಮಹಾತ್ಮ ದೇವಸ್ಥಾನಕ್ಕೆ ಹೋಗಿ ಬಳಿಕ ವೇದಾವತಿ ನದಿ ಪ್ರವಾಹದಿಂದ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಏಳು ಜನರನ್ನು ಬಳ್ಳಾರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
ಬುಧವಾರ ಸಂಜೆ ದೇವಸ್ಥಾನಕ್ಕೆ ತೆರಳಿದ್ದ ಪೂಜಾರಿ, ಅವರ ಪತ್ನಿ, ಮತ್ತು ಇನ್ನಿಬ್ಬರು ಸೇರಿದಂತೆ ನಾಲ್ವರು ಅಲ್ಲೇ ಉಳಿದಿದ್ದರು. ರಾತ್ರಿ ವೇದಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ದೇವಸ್ಥಾನವು ನೀರಿನಿಂದ ಆವೃತವಾಗಿತ್ತು.
ಬೆಳಗ್ಗೆ ವಿಷಯ ತಿಳಿದ ಸಿರುಗುಪ್ಪದ ಅಗ್ನಿಶಾಮಕ ದಳದವರು ನಾಲ್ಕು ಜನರು ರಕ್ಷಣೆಗೆ ಹೋಗಿದ್ದಾರೆ. ಆದರೆ ನೀರಿನ ರಭಸಕ್ಕೆ ರಕ್ಷಣೆಗೆ ಹೋದ ದೋಣಿಯೇ ಮುಗುಚಿದೆ. ನಾಲ್ಕು ಜನ ಸಿಬ್ಬಂದಿಗಳ ಪೈಕಿ ಮೂವರು ದೇವಸ್ಥಾನದ ತಡೆಗೋಡೆ ಆಸರೆಯಿಂದ ಹೇಗೋ ದೇವಸ್ಥಾನವನ್ನು ಸೇರಿಕೊಂಡಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಮುಗುಚಿದ ದೋಣಿಯ ನೆರವಿನೊಂದಿಗೆ ಒಂದುವರೆ ಕಿಲೋ ಮೀಟರ್ ಹೋಗಿ, ನಂತರ ಈಜಿಕೊಂಡು ದಡ ಸೇರಿದ್ದಾರೆ.
ನಂತರದಲ್ಲಿ ಬಳ್ಳಾರಿಯ ಬ್ರಿಗೇಡ್ ತಂಡವು ರಕ್ಷಣೆಗೆ ಹೋದಾಗ ನೀರಿನ ಸೆಳುವು ಹೆಚ್ಚಾಗಿದ್ದರಿಂದ ಸ್ವಲ್ಪ ಹೊತ್ತು ಕಾದು ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಸೇರಿದಂತೆ ಏಳು ಜನರನ್ಮು ರಕ್ಷಣೆ ಮಾಡಿದ್ದಾರೆ.
ಚಿತ್ರದುರ್ಗದ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ವೇದಾವತಿ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿನ ಹೊಲ ಗದ್ದೆಗಳಿಗೂ ನೀರು ನುಗ್ಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಾಧ್ಯವಾಗದೆ ಇರುವುದರಿಂದ ವಿವಿಯ ನಿಗದಿತ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.
ರಕ್ಷಣೆ ಮಾಡಲ್ಪಟ್ಟವರು: ನಾಗೇಂದ್ರ – ಅರ್ಚಕರು, ಹರಿಪ್ರಸಾದ್ (ದೇವಸ್ಥಾನದ ಭಕ್ತರು), 3. ರೇಖಾ (ಹರಿಪ್ರಸಾದ್ ಪತ್ನಿ), ೪. ನಾಗರಾಜ್- ಎಂಜಿನಿಯರ್, ಸಿರುಗುಪ್ಪ ತಾಲೂಕಿನ ಅಗ್ನಿ ಶಾಮಕ ಸಿಬ್ಬಂದಿಗಳಾದ ೫. ಸುಧೀರ್ ಮತ್ತು ೬. ಮಂಜುನಾಥ್. ಈಜಿ ದಡ ಸೇರಿದ ರಕ್ಷಣಾ ಸಿಬ್ಬಂದಿ ಲಿಂಗರಾಜ್.
ಇದನ್ನೂ ಓದಿ | Rain News | ಉಕ್ಕಿ ಹರಿಯುತ್ತಿರುವ ವೇದಾವತಿ, ಶನಿ ದೇವಸ್ಥಾನದಲ್ಲಿ ಸಿಲುಕಿದ 14 ಜನರ ರಕ್ಷಣೆಗೆ ಹೋದ ಬೋಟೇ ಪಲ್ಟಿ