ಗದಗ: ಜೀವ ಹೋಗುತ್ತಿದೆ, ರೈತರೊಬ್ಬರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಬೇಗ ವಾಹನವನ್ನು ತನ್ನಿ, ಅವರನ್ನು ಆಸ್ಪತ್ರೆಗೆ ಒಯ್ಯೋಣ ಎಂದು ಕೇಳಿಕೊಂಡರೂ ಮಳೆಯಿಂದಾಗಿ (Rain News) ರಸ್ತೆ ಸರಿ ಇಲ್ಲದ ಕಾರಣ ಯಾವ ವಾಹನವೂ ಹೊಲದತ್ತ ಬರಲು ಒಪ್ಪಲಿಲ್ಲ. ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆಯದೇ ಇದ್ದ ಕಾರಣ, ರೈತರೊಬ್ಬರು ಹೊಲದಲ್ಲಿಯೇ ಮೃತಪಟ್ಟಿದ್ದಾರೆ.
ಪ್ರಸಕ್ತ ಬಾರಿ ಮಳೆ ಸಾಕಷ್ಟು ಅವಾಂತರವನ್ನು ಸೃಷ್ಟಿ ಮಾಡಿದೆ. ಬಹುತೇಕ ಜಿಲ್ಲೆಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದರ ಪರಿಣಾಮ ಅನಾರೋಗ್ಯ ಎಂದರೂ ಆಸ್ಪತ್ರೆಗೆ ತಲುಪಲು ಸಾಧ್ಯವಾಗದ ದುಸ್ಥಿತಿ ಎದುರಾಗಿದೆ. ಇಂಥದ್ದೊಂದು ಪರಿಸ್ಥಿತಿಗೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಸಾಕ್ಷಿಯಾಗಿದ್ದು, ಅಧಿಕ ರಕ್ತದೊತ್ತಡ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಕರಿಯಪ್ಪ ಗೌಡರ (68) ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಕೇರಿ ಗ್ರಾಮದ ರಸ್ತೆಗಳು ಹದಗೆಟ್ಟಿವೆ. ಅಲ್ಲದೆ, ಇಲ್ಲಿ ಹೊಲಕ್ಕೆ ಹೋಗಬೇಕೆಂದರೆ ಹಳ್ಳ ದಾಟಿ ಹೋಗಬೇಕು. ಕರಿಯಪ್ಪ ಎಂದಿನಂತೆ ಶುಕ್ರವಾರ ಬೆಳಗ್ಗೆಯೂ ಹಳ್ಳ ದಾಟಿ ಹೊಲಕ್ಕೆ ಕೆಲಸಕ್ಕೆಂದು ತೆರಳಿದ್ದರು. ಆಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಕುಸಿದು ಕುಳಿತುಕೊಂಡಿದ್ದಾರೆ.
ಕರಿಯಪ್ಪ ಕುಸಿದು ಕುಳಿತಿದ್ದನ್ನು ಕಂಡ ಅಕ್ಕಪಕ್ಕದಲ್ಲಿದ್ದವರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಹೊಲದಿಂದ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಅಲ್ಲಿ ಯಾವುದೇ ವಾಹನವೂ ಸ್ಥಳಕ್ಕೆ ಬರಲು ಒಪ್ಪಲಿಲ್ಲ. ಬಳಿಕ ಅವರನ್ನು ಹಳ್ಳ ದಾಟಿಸಲು ಪ್ರಯತ್ನವನ್ನೂ ಪಡಲಾಗಿದೆ. ಆದರೆ, ಅಷ್ಟರಲ್ಲಿ ಕರಿಯಪ್ಪ ಹೊಲದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಶವ ಸಾಗಿಸಲು ಸಹ ರಸ್ತೆ ಸಮರ್ಪಕವಾಗಿಲ್ಲದ ಕಾರಣ ಅನಿವಾರ್ಯವಾಗಿಯೇ ನಾಲ್ಕು ಮಂದಿ ಸೇರಿ ಮೃತದೇಹವನ್ನು ಸ್ಥಳಾಂತರ ಮಾಡುವಂತಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ. ಸೂಕ್ತ ಸೌಲಭ್ಯ, ಸೌಕರ್ಯವನ್ನು ಕಲ್ಪಿಸಬೇಕಾದ ಸರ್ಕಾರ ಇನ್ನಾದರೂ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಕ್ಕೆ ಒತ್ತು ಕೊಡಬೇಕಿದೆ ಎಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ | Rain ruckus | ಅಲ್ಲೆಲ್ಲೋ ಮಳೆಯಾದರೂ ತುಂಬುತ್ತಾಳೆ ಮಲಪ್ರಭೆ, ಗದಗ ವಾಸಿಗಳಿಗೆ ಮಾತ್ರ ನಿತ್ಯ ʻತೀರದʼ ಆತಂಕ!