Site icon Vistara News

Rain News | ಅಂಕೋಲಾ ರಾಷ್ಟ್ರೀಯ ಹೆದ್ದಾರಿ ರಸ್ತೆ ಕುಸಿತ; ಆತಂಕದಲ್ಲಿ ವಾಹನ ಸವಾರರು

rain news

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ (Rain News) ಮಳೆಯಾಗುತ್ತಿದ್ದು, ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಗ್ರಾಮದ ಬಳಿ ಕಿರು ಸೇತುವೆಯಂಚಿನ ರಸ್ತೆ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.

ಅಂಕೋಲಾದ ಬಾಳೆಗುಳಿಯಿಂದ ಯಲ್ಲಾಪುರ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಅತಿ ಹೆಚ್ಚು ಸರಕು ಸಾಗಣೆ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಯ ಪಿಚ್ಚಿಂಗ್ ಕಿತ್ತುಹೋಗಿ ರಸ್ತೆ ಕುಸಿದಿದ್ದು, ಹೆದ್ದಾರಿಯಲ್ಲಿ 2 ಮೀಟರಿನಷ್ಟು ಅಗಲದ ಹೊಂಡ ಬಿದ್ದಿದೆ. ದಿನವೊಂದಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಉತ್ತರಕನ್ನಡ ವಿಭಾಗದ ಕಿರಿಯ ಅಭಿಯಂತರ ಪಿ.ಕೆ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆ ಬೀಳುತ್ತಿರುವ ಹಿನ್ನೆಲೆ ಪಾಲಿಥಿನ್ ಶೀಟಿನ ಹೊದಿಕೆಯನ್ನು ಹಾಕಿ ಮಳೆಯಿಂದ ಇನ್ನೂ ಕುಸಿಯದಂತೆ ರಕ್ಷಣೆ ನೀಡಲಾಗುತ್ತಿದೆ. ಪರಿಣಿತರ ತಂಡದಿಂದ ಸ್ಥಳ ಪರೀಕ್ಷೆ ನಡೆಸಿ ತುರ್ತು ದುರಸ್ತಿ ಕಾಮಗಾರಿ ನಡೆಸಲಾಗುವುದು ಎಂದಿದ್ದಾರೆ.

ರಸ್ತೆ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಸಂತೋಷ ಶೆಟ್ಟಿ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಬ್ಯಾರಿಕೇಡ್ ಅಳವಡಿಸಿ ಹೆದ್ದಾರಿಯ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆಯಲ್ಲಿಯೂ ಪೊಲೀಸ್ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಹೆದ್ದಾರಿಯಲ್ಲಿ ಮಲ್ಟಿ ಎಕ್ಸೆಲ್‌ನ ಭಾರೀ ವಾಹನಗಳು ಸಂಚರಿಸುವುದರಿಂದ ಸೂಕ್ತ ನಿಗಾವಹಿಸಲಾಗುತ್ತಿದೆ. ಸೇತುವೆ ಬಳಿಯ ರಸ್ತೆಯ ಮೇಲೆ ಬಹಳಷ್ಟು ಹೊಂಡಗಳಿದ್ದು, ಜಲ್ಲಿಕಲ್ಲು ಮತ್ತಿತರ ಸಾಮಗ್ರಿಗಳನ್ನು ಬಳಸಿ ಜೆಸಿಬಿ ಮೂಲಕ ಹೊಂಡಗಳನ್ನು ಮುಚ್ಚಲಾಗುತ್ತಿದೆ.

ಇದನ್ನೂ ಓದಿ | ಗುಡ್ಡದಲ್ಲಿ ಬಿರುಕು | ಮಡಿಕೇರಿ‌‌ ಸಮೀಪ ರಾಷ್ಟ್ರೀಯ ಹೆದ್ದಾರಿ- 275ರಲ್ಲಿ ವಾಹನ ಸಂಚಾರ ನಿಷೇಧ

Exit mobile version