ತುಮಕೂರು: ಇಲ್ಲಿನ ತಿಪಟೂರು ತಾಲೂಕಿನ ಮಾಚಘಟ್ಟ ಗ್ರಾಮದಲ್ಲಿ ಸತತ ಮಳೆಗೆ (Rain News) ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದೆ. ನೀರಿನ ರಭಸವನ್ನು ಲೆಕ್ಕಿಸದೆ ಬೈಕ್ ಚಲಾಯಿಸಲು ಹೋಗಿ ಸವಾರನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿದ ಘಟನೆ ನಡೆದಿದೆ.
ಸತತ ಮಳೆಗೆ ಕೆರೆ ಕೋಡಿ ಬಿದ್ದು ಸೇತುವೆಗೆ ನೀರು ನುಗ್ಗಿದೆ. ಪರಿಣಾಮ ಮೂರು ಅಡಿಗೂ ಹೆಚ್ಚು ನೀರು ರಭಸವಾಗಿ ಹರಿಯುತ್ತಿದೆ. ಅಪಾಯ ಅರಿಯದ ಬೈಕ್ ಸವಾರ ಸೇತುವೆ ದಾಟಲು ಮುಂದಾಗಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಸಮೇತ ಸ್ವಲ್ಪ ದೂರ ನೀರಿನ ರಭಸಕ್ಕೆ ತೇಲಿ ಹೋಗಿದ್ದಾರೆ.
ಕೂಡಲೇ ನೆರವಿಗೆ ಬಂದ ಸ್ಥಳೀಯರು ಬೈಕ್ ಸವಾರರನ್ನು ರಕ್ಷಿಸಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನೀರಿನಲ್ಲಿ ಮುಳುಗಡೆಯಾಗಿದ್ದ ದ್ವಿಚಕ್ರ ವಾಹನವನ್ನು ಸ್ಥಳೀಯರ ಸಹಾಯದಿಂದ ಮೇಲಕ್ಕೆ ತರಲಾಯಿತು.
ಮಾಚಘಟ್ಟ ಗ್ರಾಮಸ್ಥರಿಗೆ ಜಲದಿಗ್ಭಂದನ
ಮಾಚಘಟ್ಟ ಗ್ರಾಮಕ್ಕೆ ಜಲದಿಗ್ಭಂದನದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರು ಓಡಾಡಲು ಆಗದೇ ಪರದಾಟ ಅನುಭವಿಸುತ್ತಿದ್ದಾರೆ. ಸರಿಯಾದ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂಷಿಸಿದ್ದಾರೆ.
ಇದನ್ನೂ ಓದಿ | ಮಾಣಿಕವಾಡಿಯ ಮಹಾಮಳೆ: ಒಂದೇ ಗಂಟೆಯಲ್ಲಿ 400 ಮನೆಗೆ ನುಗ್ಗಿದ ನೀರು, 12 ಮನೆಗಳು ಧರೆಗೆ