Site icon Vistara News

Rain News : ʻಮಹಾʼ ಮಳೆಗೆ ಜನರು ತತ್ತರ; ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ

Rain Effected

ಬೆಳಗಾವಿ: ಮಳೆ ಅವಾಂತರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಬಳ್ಳಾರಿ ನಾಲಾಗೆ ಒಳಹರಿವು ಹೆಚ್ಚಳಗೊಂಡಿದೆ. ಹೀಗಾಗಿ ಬೆಳಗಾವಿಯ ಯಳ್ಳೂರ ಗ್ರಾಮದಲ್ಲಿ ಸಾವಿರ ಎಕರೆ ಪ್ರದೇಶದ ಭತ್ತದ ಬೆಳೆ ಜಲಾವೃತಗೊಂಡಿದೆ.

ಜೂನ್ ಮೊದಲ ವಾರದಲ್ಲಿ ರೈತರು ಬಾಸೂಮತಿ, ಇಂದ್ರಾಣಿ ಸೋನಮ್, ಸೂಪರ್ ಸೋನಮ್, ಅಮನ್, ಸಾಯಿರಾಮ್ ಸೇರಿ ವಿವಿಧ ತಳಿಯ ಭತ್ತ ನಾಟಿ ಮಾಡಿದ್ದರು. ಆದರೆ ಇದೀಗ ನಿರಂತರ ಮಳೆಯಿಂದಾಗಿ ಭತ್ತದ ಬೆಳೆ ಕೆರೆಯಂತಾಗಿದೆ. ಹೀಗೆ ಮಳೆ ಮುಂದುವರಿದರೆ ಭತ್ತದ ಬೆಳೆ ನೀರಿನಲ್ಲಿ‌ ಮುಳುಗುವ ಆತಂಕ ಇದೆ. ಮಳೆ ಬಂದರೂ ಕಷ್ಟ ಬಾರದೆ ಇದ್ದರೂ ನಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಮೊಣಕಾಲಷ್ಟು ತುಂಬಿರುವ ನೀರು

ರೈತರು ಬಳ್ಳಾರಿ ನಾಲಾದಲ್ಲಿ ಹೂಳೆತ್ತುವ ಕಾರ್ಯ ಮಾಡುವಂತೆ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ 800 ಕೋಟಿ ರೂ. ಅನುದಾನ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ ಎಂದು ಕಿಡಿಕಾರಿದ್ದಾರೆ. ಬಳ್ಳಾರಿ ನಾಲಾ ನೀರು ಬೆಳಗಾವಿ ತಾಲೂಕಿನ ಯಳ್ಳೂರದಿಂದ ಗೋಕಾಕ ತಾಲೂಕಿನ ಹುದಲಿಯವರೆಗೆ ಹರಿಯುತ್ತದೆ. ಬಳಿಕ ಘಟಪ್ರಭಾ ನದಿಗೆ ಸೇರಲಿದೆ. ಸುಮಾರು 28 ಕಿ.ಮೀ ಹರಿದು ಅಕ್ಕಪಕ್ಕದ ಜಮೀನುಗಳಿಗೂ ಹಾನಿಯನ್ನುಂಟು ಮಾಡುತ್ತಿದೆ. ಬೆಳಗಾವಿ ತಾಲೂಕಿನ ಶಾಹಾಪೂರ, ಅನಗೋಳ, ವಡಗಾಂವ, ಮಾಧವಪುರ, ದಾಮನೆ ಹಾಗೂ ಹಲಗಾ, ಅಲಾರವಾಡ, ಕುಡುಚಿ, ಸಾಂಬ್ರಾ ಸೇರಿ ನಿಲಜಿ, ಸುಳೇಬಾವಿ, ಮುತಗಾದ ರೈತರು ಕಂಗಾಲಾಗಿದ್ದಾರೆ.

14 ಸೇತುವೆಗಳು ಮುಳುಗಡೆ

ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಹಿರಣ್ಯಕೇಶಿ, ಘಟಪ್ರಭಾ ನದಿ ನೀರು ಒಳಹರಿವು ಹೆಚ್ಚಳಗೊಂಡಿದೆ. ಕೃಷ್ಣಾ ನದಿಗೆ 92 ಸಾವಿರ ಕ್ಯೂಸೇಕ್‌ನಷ್ಟು ನೀರು ಹರಿದು ಬರುತ್ತಿದೆ. ಧೂದಗಂಗಾ ನದಿಗೆ 20 ಸಾವಿರ ಕ್ಯೂಸೆಕ್‌, ರಾಜಾಪುರ ಬ್ಯಾರೇಜ್‌ನಿಂದ 72 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವು ಹೆಚ್ಚಳಗೊಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 14 ಸೇತುವೆಗಳು ಮುಳುಗಡೆ ಆಗಿದೆ.

ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಟ್ಟು 9 ಕೆಳಹಂತದ ಸೇತುವೆಗಳು ಮುಳುಗಡೆ ಆಗಿದೆ. ದೂಧ್‌ಗಂಗಾಗೆ ಅಡ್ಡಲಾಗಿ ನಿರ್ಮಿಸಿದ ನಿಪ್ಪಾಣಿ ತಾಲೂಕಿನ ಬೋಜ್ – ಕಾರದಗಾ, ಮಲಿಕವಾಡ – ದತ್ತವಾಡ ಹಾಗು ವೇದಗಂಗಾಗೆ ಅಡ್ಡಲಾಗಿ ನಿರ್ಮಿಸಿದ ಭೋಜವಾಡಿ – ನಿಪ್ಪಾಣಿ, ಕುನ್ನೂರು – ಬಾರವಾಡ, ಸಿದ್ನಾಳ್ – ಅಕ್ಕೋಳ, ಭೋಜ್ – ಕುನ್ನೂರು, ಭೀವಶಿ – ಜತ್ರಾಟ ಎಲ್ಲವೂ ಮುಳುಗಡೆಯಾಗಿದೆ.

ಮಾತ್ರವಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಚಿಕ್ಕೋಡಿ ತಾಲೂಕಿನ ಮಾಂಜರಿ – ಬಾವನಸೌದತ್ತಿ, ಕಾಗವಾಡ ತಾಲೂಕಿನ ಮಂಗಾವತಿ – ರಾಜಾಪುರ ಸೇತುವೆಗಳು ನೀರುಪಾಲಾಗಿದೆ. ಹಿರಣ್ಯಕೇಶಿಗೆ ಅಡ್ಡಲಾಗಿ ನಿರ್ಮಿಸಿದ ಹುಕ್ಕೇರಿ ತಾಲೂಕಿನ ಅರ್ಜುನವಾಡಿ – ಕೋಚರಿ, ಅರ್ಜುನವಾಡಿ – ಕುರ್ಣಿ, ಕುರ್ಣಿ – ಕೋಚರಿ ಹಾಗೂ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಶೆಟ್ಟಿಹಳ್ಳಿ – ಮರಣಹೋಳ ಕೆಳಹಂತದ ಸೇತುವೆ ಮುಳುಗಿವೆ. ಹಾಲತ್ರಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ ಖಾನಾಪುರ ತಾಲೂಕಿನ ಖಾನಾಪುರ ಹೆಮ್ಮಡಗಾ ಕೆಳಹಂತದ ಸೇತುವೆ ಮುಳುಗಡೆ ಆಗಿದೆ. ಇತ್ತ ಸೇತುವೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ನದಿ ತೀರಕ್ಕೆ ತೆರಳದಂತೆ ಪೊಲೀಸರಿಂದ ಸೂಚನೆ

ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪನದಿಗಳ ಒಳಹರಿವು ಹೆಚ್ಚಳಗೊಂಡಿದೆ. ಹೀಗಾಗಿ ಸದಲಗಾ ಪೊಲೀಸರು ಮೈಕ್‌ ಮೂಲಕ ಜನರಿಗೆ ನದಿ ಬಳಿ ಹೋಗದಂತೆ ಡಂಗುರ ಸಾರುತ್ತಿದ್ದಾರೆ. ನದಿಯ ನೀರಿನ ಮಟ್ಟ ಹೆಚ್ಚಾಗಿದೆ ನದಿ ತೀರದ ಬಳಿ ಯಾರು ಹೋಗಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಕೆಲವು ಸೇತುವೆಗಳು ಮುಳುಗಡೆಯಾಗಿದ್ದು ಆ ಸೇತುವೆಯನ್ನು ಬಳಸದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Weather report : ವಾರಾಂತ್ಯದಲ್ಲಿ ಬೆಂಗಳೂರು ಗಡಗಡ; ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ

ದೇಗುಲಗಳು ಜಲಾವೃತ

ಮಹಾರಾಷ್ಟ್ರ ಸೇರಿ ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ, ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಆಗಿದೆ. ಯಾದಗಿರಿ ನಗರದ ಹೊರಭಾಗದಲ್ಲಿರುವ ಭೀಮಾನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ವಡಗೇರಾ ತಾಲೂಕಿನ ಗುರುಸಣಗಿ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಭೀಮಾನದಿಗೆ 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಬತ್ತಿ ಹೋಗಿದ್ದ ಭೀಮಾನದಿ ಒಡಲು ಈಗ ಭರ್ತಿಯಾಗುತ್ತಿದ್ದು, ನದಿ ತೀರದ ದೇಗುಲಗಳು ಜಲಾವೃತಗೊಂಡಿದೆ. ವೀರಾಂಜನೇಯ, ಕಂಗಳೇಶ್ವರ ದೇಗುಲಗಳಿಗೆ ಜಲ ದಿಗ್ಬಂಧನ ಹಾಕಲಾಗಿದೆ. ಇತ್ತ ದೂರದಿಂದಲೇ ಭಕ್ತರು ನದಿ ತೀರದಲ್ಲಿ ದರ್ಶನ ಪಡೆಯುತ್ತಿದ್ದಾರೆ.

ದರ್ಗಾದೊಳಗೆ ನುಗ್ಗಿದ ನೀರು

ದರ್ಗಾಗೆ ಜಲ ದಿಗ್ಭಂಧನ

ದೂಧಗಂಗಾ ನದಿಯ ರುದ್ರ ನರ್ತನಕ್ಕೆ ಕಾರದಗಾ ಗ್ರಾಮದ ಆರಾಧ್ಯ ದೈವ ಬಂಗಾಲಿ ಬಾಬಾ ದರ್ಗಾಗೆ ಜಲದಿಗ್ಭಂಧನ ಹಾಕಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬಂಗಾಲಿ ಬಾಬಾ ದರ್ಗಾದಲ್ಲಿ ಮೊಳಕಾಲಷ್ಟು ನೀರು ತುಂಬಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version