ರಾಮನಗರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಬೆಳಗುಂಬ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಸೋಮವಾರ ಮುಂಜಾನೆ ಖಾಸಗಿ ಬಸ್‌ಗಳು ಹಾಗೂ ಕಾರುಗಳು ಸಿಲುಕಿಕೊಂಡಿವೆ.
ರಾಮನಗರ ಜಿಲ್ಲೆಯ ಬಸವನಪುರ ಬಳಿ ಬೆಳಗುಂಬದ ಹೆದ್ದಾರಿ ಅಂಡರ್‌ಪಾಸ್‌ಗೆ ಭಾರಿ ಪ್ರಮಾಣದಲ್ಲಿ ಮಳೆ ನೀರು ನುಗ್ಗಿ ಕೆರೆಯಂತಾಗಿದೆ. ಇಲ್ಲಿ ಮಳೆಯಲ್ಲೇ ತೆರಳಲು ಪ್ರಯತ್ನಿಸಿದ ಕಾರುಗಳು ಹಾಗೂ ಉದಯರಂಗ ಖಾಸಗಿ ಬಸ್ ಸಿಲುಕಿಕೊಂಡವು. ನೀರಿನ ಮಟ್ಟ ಹೆಚ್ಚಿದ್ದರಿಂದ ಪ್ರಯಾಣಿಕರು ಭಯಭೀತರಾದರು. ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಬೆಳಗುಂಬದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು.
ಹಲವು ಕಾರುಗಳು ಕೂಡ ನೀರಿನ ನಡುವೆ ಸಿಲುಕಿಕೊಂಡವು. ನೀರಿನ ಮಟ್ಟ ಹೆಚ್ಚಿದ್ದರಿಂದ ಕಾರಿನ ತುಂಬಾ ನೀರು ತುಂಬಿಕೊಂಡಿದ್ದು, ಕಾರು ಪೂರ್ತಿಯಾಗಿ ಮುಳುಗುವ ಮುನ್ನ ಅದರಲ್ಲಿದ್ದ ಪ್ರಯಾಣಿಕರು ಆಚೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಕೆಲವು ಕಾರುಗಳು ನೀರಿನಲ್ಲಿ ಮಗುಚಿಕೊಂಡಿವೆ.
ಅಂಡರ್‌ಪಾಸ್‌ಗೆ ನುಗ್ಗಿರುವ ಭಾರಿ ನೀರು ಸೂಕ್ತವಾಗಿ ಹರಿದುಹೋಗಲು ವ್ಯವಸ್ಥೆಯಾಗಿಲ್ಲ. ಅವೈಜ್ಞಾನಿಕ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಇದು ಸಂಭವಿಸಿದೆ ಎನ್ನಲಾಗಿದೆ. ಇದೇ ರೀತಿ ಮುಂದುವರಿದರೆ ಬೆಂಗಳೂರು- ಮೈಸೂರು ಹೆದ್ದಾರಿ ಮುಂದಿನ ದಿನಗಳಲ್ಲೂ ನರಕಸದೃಶವಾಗಲಿದೆ.
ಇದನ್ನೂ ಓದಿ | Rain news | ಧಾರಾಕಾರ ಮಳೆ, ಕೊಡಗಿನ ರಸ್ತೆಗಳು ಮುಳುಗಡೆ