ಮಂಡ್ಯ/ತುಮಕೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯದಲ್ಲಿ ಹಲವೆಡೆ ಮಳೆ (Rain news) ಅಬ್ಬರಿಸುತ್ತಿದ್ದು, ಸಿಡಿಲಿಗೆ ಜಾನುವಾರುಗಳು ಬಲಿಯಾಗಿವೆ. ಮಂಡ್ಯ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಪ್ರೇಮಚಂದ್ರ ಎಂಬುವವರಿಗೆ ಸೇರಿರುವ ಎತ್ತುಗಳು ಸಿಡಿಲಿಗೆ ಮೃತಪಟ್ಟಿವೆ. 1 ಲಕ್ಷ ರೂ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು ಕಂಗಾಲಾಗಿದ್ದು, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಲ್ಲಿ ಬಿರುಗಾಳಿ ಮಳೆ
ತುಮಕೂರಿನ ಕೊರಟಗೆ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಬಿರುಗಾಳಿ ಮಳೆಯಾಗುತ್ತಿದೆ. ಹೊಳವನಹಳ್ಳಿ, ಅರಸಾಪುರ, ಕಾಶಾಪುರ, ಹಕ್ಕಿಪಿಕ್ಕಿ ಕಾಲೋನಿ ಗ್ರಾಮದ ಸುತ್ತಮುತ್ತ ಬಿರುಗಾಳಿ ಮಳೆಯಾಗುತ್ತಿದೆ. ಗಾಳಿ ಸಹಿತ ಭಾರಿ ಮಳೆಗೆ 8 ಮನೆಗಳ ಚಾವಣಿ ಹಾರಿ ಹೋಗಿವೆ.
ಹೊಲವನಹಳ್ಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೊಹಮದ್ ಆಲಿ ಎಂಬವರ ಮನೆಯಲ್ಲಿದ್ದ ವಸ್ತುಗಳು ಭಸ್ಮವಾಗಿದೆ. ಹೊಳವನಹಳ್ಳಿ ವಿಭಾಗದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಕೊರಟಗೆರೆ ತಹಸೀಲ್ದಾರ್ ಮುನಿಸ್ವಾಮಿ ರೆಡ್ಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಇದನ್ನೂ ಓದಿ: Murder case: ಜೈಲಿಂದ ಬಂದಿದ್ದೀನಿ, ನಾನೇ ನಿಮಗೆಲ್ಲ ಬಾಸ್ ಎಂದವನಿಗೆ ಚಾಕು ಹಾಕಿದ ಸ್ನೇಹಿತರು
ವಿದ್ಯುತ್ ಸ್ಪರ್ಶಿಸಿ ಹಸು ಸಾವು
ತುಮಕೂರಿನ ತುರುವೇಕೆರೆ ತಾಲೂಕಿನ ಸೂಳೆಕೆರೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಹಸುವೊಂದು ಮೃತಪಟ್ಟಿದೆ. ಗ್ರಾಮದ ಶಾಂತಮ್ಮ ಎಂಬುವವರಿಗೆ ಸೇರಿದ ಹಸುವೊಂದು ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಕಳೆದುಕೊಂಡ ಶಾಂತಮ್ಮ ಕಣ್ಣೀರು ಹಾಕುತ್ತಿದ್ದಾರೆ. ಸಾಲ ಮಾಡಿ ಹಸುವನ್ನು ಖರೀದಿ ಮಾಡಲಾಗಿತ್ತು, ಅದರಿಂದಲೇ ಜೀವನವೂ ನಡೆಯುತ್ತಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಚಾವಣಿ ಕುಸಿದು ಕಾರಿನ ಗ್ಲಾಸ್ ಪೀಸ್ ಪೀಸ್
ರಾಜಧಾನಿ ಬೆಂಗಳೂರಲ್ಲಿ ಕಳೆದ 23ರಂದು ಸುರಿದ ಮಳೆಯು ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಕೋರಮಂಗಲದ ರೆಸ್ಟೋರೆಂಟ್‌ನಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಭಾರಿ ಮಳೆಗೆ ರೆಸ್ಟೋರೆಂಟ್ ಮುಂಭಾಗ ಮೇಲ್ಚಾವಣಿ ಕುಸಿದಿದೆ. ಮೇಲ್ಚಾವಣಿ ಬಿದ್ದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಕಾರಿನ ಗ್ಲಾಸ್ ಪುಡಿ ಪುಡಿಯಾಗಿದೆ. ಪಕ್ಕದಲ್ಲಿ ನಿಂತಿದ್ದ ಸೆಕ್ಯೂರಿಟಿ ಗಾರ್ಡ್ ಹಾಗೂ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾವಣಿ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ