ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನದಿಗಳು ತುಂಬಿಕೊಂಡಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. 1ರಿಂದ 12ನೇ ತರಗತಿವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದು, ಕರಾವಳಿ ತಾಲೂಕುಗಳಲ್ಲಿ 1ರಿಂದ 12ನೇ ತರಗತಿವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಮಲೆನಾಡಿನಲ್ಲಿ ಮಳೆ ಆರ್ಭಟ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ ಮುಂತಾದೆಡೆ, ಕುದುರೆಮುಖ ಪಶ್ಚಿಮ ಘಟ್ಟ ಸಾಲಿನಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗಳ ಹರಿವಿನಲ್ಲಿ ಕೊಂಚ ಏರಿಕೆಯಾಗಿದೆ. ಭದ್ರಾ, ನೇತ್ರಾವತಿ, ತುಂಗಾ ನದಿಗಳಲ್ಲಿ ಹರಿವು ಹೆಚ್ಚಳವಾಗಿದೆ.
ಉಡುಪಿಯಲ್ಲಿ ಆರೆಂಜ್ ಅಲರ್ಟ್, ತುಂಬಿ ಹರಿದ ನದಿಗಳು
ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ನದಿಗಳು ತುಂಬಿವೆ. ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ ಬನ್ನಾಡಿ ಹಡೋಲಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಬನ್ನಾಡಿ ಹೊಳೆ ಮಧ್ಯದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮಳೆ ಹೀಗೆಯೇ ಮುಂದುವರೆದರೆ ಬಂದ್ ಆಗುವ ಸಾಧ್ಯತೆ ಕಂಡುಬಂದಿದೆ. ನೆರೆ ನೀರಿನಿಂದ ಮನೆಗಳು ಸುತ್ತುವರಿದಿವೆ. ಇನ್ನೂ ಹೆಚ್ಚಿನ ನೆರೆ ಏರಿಕೆ ಆದರೆ ರಕ್ಷಣಾ ಕಾರ್ಯದ ಅವಶ್ಯಕತೆ ಬೀಳಲಿದೆ.
ಉಡುಪಿಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೈಪಾಸ್ ಪರಿಸರದ ಜನ ಅಪಾಯದ ಅಂಚಿನಲ್ಲಿದ್ದಾರೆ. ಸುತ್ತಮುತ್ತ ನೀರು ತುಂಬಿಕೊಂಡಿದ್ದು, ನಿವಾಸಿಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿ ಪಾತ್ರದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ನಗರದ ಕಲ್ಸಂಕ, ಬಡಗುಪೇಟೆ ಬೈಲಕೆರೆ ಪರಿಸರದಲ್ಲಿ ನೆರೆಯ ಸ್ಥಿತಿ ಕಂಡುಬಂದಿದ್ದು, ತಗ್ಗು ಪ್ರದೇಶಗಳ ಜನರಿಗೆ ನೆರೆಯ ಭೀತಿ ಎದುರಾಗಿದೆ. ಈಗಾಗಲೇ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Rain News : ವರ್ಷಧಾರೆಗೆ ಕರಾವಳಿ ತತ್ತರ; ಬುಧವಾರ ಒಂದೇ ದಿನ ಉ.ಕ.ದಲ್ಲಿ 18, ದ.ಕ.ದಲ್ಲಿ 17 ಸೆಂ.ಮೀ. ಮಳೆ!