Site icon Vistara News

Rain news: ಬೆಂಗಳೂರಲ್ಲಿ ಆವರಿಸಿದ ಕಗ್ಗತ್ತಲು; ಭಾರಿ ಮಳೆಗೆ ಹೈರಾಣಾದ ಸಾರ್ವಜನಿಕರು

Rain News in kolar

ಬೆಂಗಳೂರು: ಕಳೆದರೆಡು ದಿನಗಳಿಂದ ಬೆಂಗಳೂರಲ್ಲಿ ಮೋಡ ಕವಿದ (rain news) ವಾತಾವರಣವಿತ್ತು. ಸಂಜೆ ವೇಳೆಗೆ ಕಾಣಿಸಿಕೊಳ್ಳುತ್ತಿದ್ದ ವರುಣ (Weather report) ಮಂಗಳವಾರ (ಜೂ.20) ಬೆಳ್ಳಂ ಬೆಳಗ್ಗೆ ಅಬ್ಬರಿಸಿದ್ದಾನೆ. ಮುಂಜಾನೆಯೇ ಬೆಂಗಳೂರು ಸಂಪೂರ್ಣ ಕಗ್ಗತ್ತಲಾಗಿತ್ತು. ಜಿಟಿಜಿಟಿಯಿಂದ ಶುರುವಾರ ಮಳೆಯು (Bangalore rain) ಆ ಬಳಿಕ ಧಾರಾಕಾರವಾಗಿ ಸುರಿಯುತ್ತಿದೆ.

ಶಾಲಾ-ಕಾಲೇಜಿಗೆ ಹೋಗುವವರು, ಕಚೇರಿಗೆ ತೆರಳುವವರು ಪರದಾಡಬೇಕಾಯಿತು. ಬಹುತೇಕ ದ್ವಿಚಕ್ರ ವಾಹನ ಸವಾರರು ಮೆಟ್ರೋದತ್ತ ಹೆಜ್ಜೆ ಹಾಕಿದ್ದು ಕಂಡು ಬಂತು. ಇದರಿಂದಾಗಿ ಮೆಟ್ರೋ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು.

ನಗರದ ಕಾರ್ಪೊರೇಷನ್‌ ಸರ್ಕಲ್‌, ವಿಧಾನಸೌಧ, ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ಮಹಾಲಕ್ಷ್ಮೀ ಲೇಔಟ್, ಕಾಮಾಕ್ಷಿಪಾಳ್ಯ ಸುತ್ತಮುತ್ತ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೂ ಮನೆಯಿಂದ ಹೊರಬರಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೆಟ್ಟು ನಿಂತ ಆಟೋ ಸಹಾಯಕ್ಕೆ ಧಾವಿಸಿದ ವಿಸ್ತಾರ ನ್ಯೂಸ್‌ ವರದಿಗಾರ

ಬೆಂಗಳೂರಿನ ಫ್ರೀಡಂಪಾರ್ಕ್‌ ಬಳಿ ವರುಣ ಅಬ್ಬರಿಸಿದ್ದಾನೆ. ಈ ನಡುವೆ ಮಳೆಯಲ್ಲೇ ಆಟೋವೊಂದು ಕೆಟ್ಟು ನಿಂತಿತ್ತು. ಇದರಿಂದಾಗಿ ಆಟೊ ಮುಂದೆ ಹೋಗದೆ ಚಾಲಕ ಪರದಾಡಬೇಕಾಯಿತು. ಆಟೋ ಚಾಲಕನ ಸಹಾಯಕ್ಕೆ ಟ್ರಾಫಿಕ್ ಪೊಲೀಸರಿಗೆ ವಿಸ್ತಾರ ನ್ಯೂಸ್‌ ವರದಿಗಾರರು ಧಾವಿಸಿದರು.

ಬೆಂಗಳೂರು ಗ್ರಾಮಾಂತರದಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಭಾಗದಲ್ಲೂ ಮಳೆಯಾಗುತ್ತಿದೆ. ಶಾಲಾ -ಕಾಲೇಜು, ಕಚೇರಿಗಳಿಗೆ ತೆರಳುವವರು ಛತ್ರಿ ಹಿಡಿದು ಹೋಗುತ್ತಿರುವುದು ಕಂಡು ಬಂತು.

ಕೋಲಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕೋಲಾರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿಯಿಂದಲೇ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಕೆಲ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ ಶಾಲೆಗಳೆಲ್ಲ ಶಿಥಿಲವಾದ ಕಟ್ಟಡದಲ್ಲಿ ತರಗತಿ‌ ನಡೆಸದಂತೆ ಮುಖ್ಯ ಶಿಕ್ಷಕರಿಗೆ ಕೋಲಾರದ ಶಿಕ್ಷಣಾಧಿಕಾರಿ ಸೂಚನೆ ನೀಡಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರದಾಟ

ಚರಂಡಿಗೆ ಬಿದ್ದ ಬೈಕ್‌ ಸವಾರರು

ಕೋಲಾರ, ಶ್ರೀನಿವಾಸಪುರ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಮೊಟಕಾಲಷ್ಟು ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಪರದಾಡಿದರು. ಚರಂಡಿ ನೀರು ರಸ್ತೆಗೆ ಬಂದ ಕಾರಣದಿಂದಾಗಿ ರಸ್ತೆ ಕಾಣದೆ ದ್ವಿಚಕ್ರ ವಾಹನ ಸವಾರರು ಚರಂಡಿಗೆ ಉರುಳಿ ಬಿದ್ದ ಘಟನೆಯು ನಡೆದಿದೆ. ಉರುಳಿ ಬಿದ್ದ ಬೈಕ್‌ ಅನ್ನು ಮೇಲಕ್ಕೆ ಎತ್ತಲು ಪರದಾಡಬೇಕಾಯಿತು. ಇನ್ನೊಂದೆಡೆ ವಿದ್ಯಾರ್ಥಿಗಳು ಕೊಳಚೆ ನೀರಿನಲ್ಲಿಯೇ ಓಡಾಡುವಂತಾಯಿತು. ಸೈಕಲ್‌ ಓಡಿಸಲು ಆಗದೆ ರಸ್ತೆಬದಿಯಲ್ಲಿ ನಿಲ್ಲುವಂತಾಯಿತು

ರಸ್ತೆಗೆ ಬಂದ ಚರಂಡಿ ನೀರಿನಲ್ಲಿ ವಿದ್ಯಾರ್ಥಿಗಳ ಸೈಕಲ್‌ ಸವಾರಿ

ರಾಮನಗರ, ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಮಳೆ

ರಾಮನಗರದಲ್ಲಿ ಎಡೆಬಿಡದೆ ತುಂತುತು ಮಳೆ ಸುರಿಯುತ್ತಿದ್ದು, ಇದರಿಂದಾಗಿ ಶಾಲಾ-ಕಾಲೇಜು, ಕೆಲಸಗಳಿಗೆ ಹೋಗುವರಿಗೆ ಮಳೆ ಅಡ್ಡಿಯನ್ನುಂಟು ಮಾಡಿತ್ತು. ಚನ್ನಪಟ್ಟಣ, ಕನಕಪುರ, ಮಾಗಡಿಯಲ್ಲೂ ಮಳೆಯಾಗುತ್ತಿದೆ. ಮಳೆಬಾರದೆ ಕಂಗೆಟ್ಟಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ರಾಮನಗರದಲ್ಲೂ ಹಿಡಿದುಕೊಂಡ ಮಳೆ

ಚಿಕ್ಕಬಳ್ಳಾಪುರದಲ್ಲೂ ಸೋಮವಾರ ರಾತ್ರಿಯಿಂದ ಸೋನೆ‌ ಮಳೆ‌ ಸುರಿಯುತ್ತಿತ್ತು. ಮುಂಗಾರು ಕೈ ಕೊಟ್ಟಿದ್ದರಿಂದ ಮಳೆಗಾಗಿ‌ ರೈತರು ಹಾತೊರೆಯುತ್ತಿದ್ದರು. ರಾಗಿ ಬಿತ್ತನೆಗಾಗಿ‌ ಕಾಯುತ್ತಿದ್ದವರಿಗೆ ಚಿಕ್ಕಬಳ್ಳಾಪುರದ ಚಿಂತಾಮಣಿ, ಶಿಡ್ಲಘಟ್ಟ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆ

ಈ ಜಿಲ್ಲೆಗಳಿಗೆ ಅಲರ್ಟ್‌

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡಿನ ಭಾಗವಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಾವಣಗೆರೆ, ತುಮಕೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯದಲ್ಲೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ವಿಜಯನಗರ ಮತ್ತು ಬಳ್ಳಾರಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಧಾರವಾಡ, ಗದಗ ಮತ್ತು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Monsoon News: ಮುಂಗಾರು ಚುರುಕು, ರಾಜಧಾನಿ ಕೂಲ್‌ ಕೂಲ್

ಸಮದ್ರಕ್ಕೆ ಇಳಿಯುವಂತಿಲ್ಲ

ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ (Fisheries warning) ಸೂಚಿಸಲಾಗಿದೆ. ಜತೆಗೆ ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಸಲಾಗಿದೆ. ಮುಂದಿನ 48 ಗಂಟೆಯಲ್ಲಿ ಗರಿಷ್ಠ ಉಷ್ಣಾಂಶವು ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್‌ ಹಾಗೂ ಕೆಲವು ಕಡೆಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version