ವಿಜಯನಗರ: ಭಾರಿ ಮಳೆಯಿಂದ (Rain news) ಹೊಲದಲ್ಲಿ ಉಂಟಾಗಿರುವ ಬೆಳೆ ಹಾನಿ ವೀಕ್ಷಿಸುವ ಸಂಬಂಧ ಇಲ್ಲಿನ ರೈತ ಉಂಚೋಟಿ ಬೊಮ್ಮಪ್ಪ ಎಂಬುವರು ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ನಡೆದು ಹೊರಟಿದ್ದರು. ಆದರೆ, ನಿಯಂತ್ರಣ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರಿಂದ ರೈತ ಬೊಮ್ಮಪ್ಪ ಶವವಾಗಿ ಪತ್ತೆಯಾಗಿದ್ದಾರೆ.
ಗರಗ-ನಾಗಲಾಪುರದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವವನ್ನು ಗ್ರಾಮ ಪಂಚಾಯತ್ ಎದುರು ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಊರಿನ ರೈತರು ಹೊಲ-ಗದ್ದೆಗಳಿಗೆ ತೆರಳಬೇಕಾದರೆ ಈ ಹಳ್ಳ ದಾಟಬೇಕು. ಸೇತುವೆ ನಿರ್ಮಾಣ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಎರಡೂವರೆ ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಆದರೆ, ವರ್ಷ ಕಳೆದರೂ ಇದುವರೆಗೆ ಕಾಮಗಾರಿಯೇ ನಡೆದಿಲ್ಲ. ಸೇತುವೆ ಇದ್ದಿದ್ದರೆ ರೈತ ಹಳ್ಳ ದಾಟುವ ವೇಳೆ ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಅನ್ಯಾಯವಾಗಿ ರೈತನ ಸಾವಿಗೆ ಕಾರಣವಾದ ಅಧಿಕಾರಿಗಳ ವಿಳಂಬ ಧೋರಣೆಗೆ ತೀವ್ರ ಆಕ್ರೋಶವನ್ನು ಹೊರಹಾಕಿದರು.
ಇದನ್ನೂ ಓದಿ | Rain News | ಮಹಾ ಮಳೆಗೆ ಕೊಡಗಿನಲ್ಲಿ ಮೊದಲ ಸಾವು