ಬೆಳಗಾವಿ : ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿರುವ ನಡುವೆಯೇ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೂ ಭಾರಿ ಮಳೆಯಾಗುತ್ತಿದೆ. ಗೋವಾ ಸಮೀಪದ ಮಾಲಶೇಜ್ ಘಾಟ್‌ನಲ್ಲಿ ಭಾರಿ ಮಳೆಯಿಂದಾಗಿ ಸೋಮವಾರ ರಾತ್ರಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಕರ್ನಾಟಕ-ಗೋವಾ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಗುಡ್ಡ ಕುಸಿತದಿಂದಾಗಿ ಮಣ್ಣು ಮತ್ತು ಕಲ್ಲುಗಳು ಹೆದ್ದಾರಿಯನ್ನು ಆವರಿಸಿದ್ದು, ಅನ್ಮೋಡ್ ಘಾಟ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೋವಾ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆ ಮೇಲೆ ಬಿದ್ದಿದ್ದ ಮಣ್ಣು-ಕಲ್ಲು ತೆರವು ಮಾಡಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕರ್ನಾಟಕ ಸಂಪರ್ಕಿಸುವ ರಸ್ತೆಯಲ್ಲಿ ಐದು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು, ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನ ಪ್ರಗತಿಯಲ್ಲಿದೆ. ಗುಡ್ಡ ಕುಸಿತದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ | ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆ ಭೀತಿ ಇದ್ದರೂ ಬೆಳಗಾವಿಯಲ್ಲಿ ನಿರ್ಲಕ್ಷ್ಯ
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಕೂಡ ಭಾರಿ ಮಳೆಯಾಗಿದ್ದು, ಪಂಚ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪಂಚ ಗಂಗಾ ನದಿ ಮೇಲಿರುವ ರಾಜಾರಾಂ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಹಲವು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮಹಾ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯ ಕೃಷ್ಣಾ ನದಿಯ ಒಳ ಹರಿವು ಹೆಚ್ಚಾಗಿದೆ.
ಇದನ್ನೂ ಓದಿ | Rain News | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ತೋಟ, ಮನೆಗಳಿಗೆ ನುಗ್ಗಿದ ನೀರು