ಕಾರವಾರ: ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ಕಾರವಾರದ ಅಸ್ನೋಟಿಯ ಆರವ ಗ್ರಾಮದ ತೋರ್ಲೆಭಾಗದಲ್ಲಿ ಶುಕ್ರವಾರ ನಡೆದಿದೆ. ಗುಲಾಬಿ ರಾಮಚಂದ್ರ ಮಾಂಜ್ರೇಕರ್ (70) ಮೃತ ದುರ್ದೈವಿ.
ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆ, ಚಿತ್ತಾಕುಲದಲ್ಲಿ ಹಣ್ಣಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ನೆನ್ನೆ ಮಧ್ಯಾಹ್ನ ಮನೆಯ ಪಕ್ಕದ ಹಳೆಯ ಕಟ್ಟಡದ ಬಳಿ ತೆರಳಿದ್ದಾಗ ಮೈಮೇಲೆ ಗೋಡೆ ಕುಸಿದಿದೆ. ಗೋಡೆಯ ಅವಶೇಷಗಳಡಿ ವೃದ್ಧೆ ಮುಚ್ಚಿಹೋಗಿದ್ದರಂದ ಇಂದು ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತಹಸೀಲ್ದಾರ್ ನಿಶ್ಚಲ ನೊರೋನ್ಹಾ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಡೆಂಗ್ಯೂಗೆ ಮೊದಲ ಬಲಿ
ಬೆಂಗಳೂರು ನಗರದಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ. 80 ವರ್ಷದ ಮಹಿಳೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಖಾಸಗಿ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಪೂರ್ವ ವಲಯದ ವಾರ್ಡ್‌ನಲ್ಲಿ ಪ್ರಕರಣ ನಡೆದಿದೆ.
ಬೈಕ್-ಟ್ರ್ಯಾಕ್ಟರ್ ಡಿಕ್ಕಿಯಾಗಿ ಆಹಾರ ಇಲಾಖೆ ನಿರೀಕ್ಷಕ ಸಾವು
ಚಾಮರಾಜನಗರ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಆಹಾರ ಇಲಾಖೆ ನಿರೀಕ್ಷಕ ಮೃತಪಟ್ಟು, ಶಿರಸ್ತೇದಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸಪುರ ಗ್ರಾಮದ ಬಳಿ ನಡೆದಿದೆ.
ಆಹಾರ ಇಲಾಖೆ ನಿರೀಕ್ಷಕ ನಾಗೇಂದ್ರ (46) ಮೃತರು. ಆಹಾರ ಇಲಾಖೆ ಶಿರಸ್ತೇದಾರ ರಮೇಶ್‌ಗೆ ಗಂಭೀರ ಗಾಯಗಳಾಗಿವೆ. ಗುಂಡ್ಲುಪೇಟೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳು, ಇಂದು ಹಂಗಲ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಮುಗಿಸಿ ಬರುವ ವೇಳೆ ಅವಘಡ ನಡೆದಿದೆ. ಅಪಘಾತದಲ್ಲಿ
ಸ್ಥಳದಲ್ಲೇ ಆಹಾರ ಇಲಾಖೆ ನಿರೀಕ್ಷಕ ನಾಗೇಂದ್ರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದು, ಗಾಯಾಳು ರಮೇಶ್‌ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್ ಮರ!
ಕಲಬುರಗಿಯಲ್ಲಿ 13 ವರ್ಷದ ಬಾಲಕಿ ಲೈಂಗಿಕ ದೌರ್ಜನ್ಯ, ತೀವ್ರ ರಕ್ತಸ್ರಾವವಾಗಿ ಸಾವು!
ಕಲಬುರಗಿ: ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ 13 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೃತಪಟ್ಟಿರುವ ಘಟನೆ (Physical Abuse) ಕಲಬುರಗಿ ನಗರದ ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯದಿಂದ ತೀವ್ರ ರಕ್ತಸ್ರಾವವಾಗಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಜ್ಜಿ ಅಂಗಡಿ ವ್ಯಾಪಾರಿ ಸರ್ಫರಾಜ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಮನೆಗೆ ಹೋಗಿ ಹೆದರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ತೀವ್ರ ರಕ್ತ ಸ್ರಾವವಾಗಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.