ಬೆಂಗಳೂರು: ರಾಜ್ಯಾದ್ಯಂತ ವರುಣನ (Rain News) ಅರ್ಭಟ ಸೋಮವಾರವೂ (ಮೇ 29) ಮುಂದುವರಿದಿದೆ. ಬಳ್ಳಾರಿಯಲ್ಲಿ ಸಿಡಿಲು ಬಡಿದು ರೈತ ಮೃತಪಟ್ಟಿದ್ದರೆ, ಶಿವಮೊಗ್ಗದಲ್ಲಿ ತೆಂಗಿನ ಮರ, ಕೊಪ್ಪಳದಲ್ಲಿ ವಿದ್ಯುತ್ ಕಂಬ, ಬೆಂಗಳೂರಲ್ಲಿ ಕಾಂಪೌಂಡ್ ಉರುಳಿ ವಾಹನಗಳು ಜಖಂಗೊಂಡಿವೆ. ಅಪಾರ ಪ್ರಮಾಣದ ಬೆಳೆಗಳಿಗೆ ಹಾನಿಯಾಗಿದೆ.
ಬಿರುಗಳಿಯೊಂದಿಗೆ ಮಳೆಯು ಸುರಿಯುತ್ತಿದ್ದು, ಸಿಡಿಲಿನ ಅಬ್ಬರ ಸೋಮವಾರವೂ ಜೋರಾಗಿತ್ತು. ಈಗಾಗಲೇ ಹಲವರ ಜೀವವನ್ನು ತೆಗೆದುಕೊಂಡಿರುವ ಸಿಡಿಲು ಸೋಮವಾರವೂ ರೈತನ ಸಾವಿಗೆ ಕಾರಣವಾಯಿತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿಯಿಂದ ವರದಿಯಾಗಿದೆ. ಬಳ್ಳಾರಿ ತಾಲೂಕಿನ ಕುಂಟನಹಾಳ್ ಗ್ರಾಮದ ರೈತ ಪೊಂಪಣ್ಣ ಮೃತ ದುರ್ದೈವಿ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಇನ್ನೆರಡು ದಿನಗಳು ಗುಡುಗು ಸಹಿತ ಭಾರಿ ಮಳೆಯಾಗುವ (Rain alert) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ (Rain news) ಸಾಧ್ಯತೆ ಇದೆ. ಇತ್ತ ಬೆಂಗಳೂರಲ್ಲಿ ಮುಂಜಾನೆ ಹೊತ್ತು ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಗುಡುಗು, ಮಿಂಚಿನೊಂದಿಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ಮೈಸೂರು, ರಾಮನಗರ ಹಾಗೂ ಚಾಮರಾಜನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬೀದರ್ ಮತ್ತು ಹಾವೇರಿ, ಕೊಡಗು ಹಾಗೂ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಗಾಳಿಯ ವೇಗವು 40-50ಕಿ.ಮೀ ಇದ್ದರೆ, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ 30-40 ಕಿ.ಮೀ ಇರಲಿದೆ.
ಸಿಡಿಲಿಗೆ ಜಾನುವಾರುಗಳು ಸಾವು
ವಿಜಯನಗರದ ಕೂಡ್ಲಿಗಿ ತಾಲೂಕಿನ ಸಕಲಾಪುರಹಟ್ಟಿ, ಅರ್ಜುನ ಚಿನ್ನೇನಹಳ್ಳಿ ಗ್ರಾಮಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಸಿಡಿಲಿಗೆ ಎರಡು ಎತ್ತುಗಳು, ಒಂದು ಆಕಳು, 5 ಕುರಿಗಳು ಮೃತಪಟ್ಟಿವೆ. ಜಾನುವಾರುಗಳು ಹೊಲದಲ್ಲಿ ಮೇಯುವಾಗ ಸಿಡಿಲು ಬಡಿದು ಮೃತಪಟ್ಟಿವೆ. ಸಕಲಾಪುರಹಟ್ಟಿಯ ಗೌಡಜ್ಜರ ತಿಮ್ಮಪ್ಪ ಎಂಬುವರಿಗೆ ಸೇರಿದ 5 ಕುರಿಗಳು, ಎರಡು ಟಗರು ಹಾಗೂ ಅರ್ಜುನ ಚಿನ್ನೇನಹಳ್ಳಿಯ ಸುರೇಶ್ ಎಂಬುಬರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು ಸಿಡಿಲಿಗೆ ಬಲಿಯಾಗಿವೆ. ಕಾನಾಹೊಸಳ್ಳಿ ಮತ್ತು ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಧಾರಾಕಾರ ಮಳೆಗೆ ವಿದ್ಯುತ್ ಸಂಪರ್ಕ ಕಡಿತ
ಚಿಕ್ಕಮಗಳೂರಿನ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆ ಆರ್ಭಟಕ್ಕೆ ಕೊಪ್ಪ ತಾಲೂಕಿನ ಜಯಪುರ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಎನ್‌ಆರ್ ಪುರ ತಾಲೂಕಿನ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ.
ಶಿವಮೊಗ್ಗದಲ್ಲಿ ಮಳೆ ಗಾಳಿಗೆ ತೆಂಗಿನ ಮರ ಧರೆಗುರುಳಿದೆ. ಇಲ್ಲಿನ ದುರ್ಗಿಗುಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಾತ್ರವಲ್ಲದೆ ಮರ ಬಿದ್ದ ರಭಸಕ್ಕೆ ಮನೆಯೊಂದರ ಕಾಂಪೌಂಡ್‌ಗೂ ಹಾನಿಯಾಗಿದೆ. ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಆಗಮಿಸಿ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವು ಕಾರ್ಯಾಚರಣೆ ನಡೆಸಿದರು.
ನೆಲಕ್ಕುರುಳಿದ ಮರಗಳು, ವಿದ್ಯುತ್ ಕಂಬಗಳು
ಕೊಪ್ಪಳದ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಸೋಮವಾರ (ಮೇ 29) ಮಧ್ಯಾಹ್ನ ಭಾರಿ ಗಾಳಿ ಮಳೆಯಾಗಿದೆ. ಹನುಮಸಾಗರ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಹಲವು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರಳಿದೆ. ಜತೆಗೆ ಮನೆಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇತ್ತ ಹಾಸನದ ವಿವಿಧೆಡೆ ವರುಣ ಅಬ್ಬರಿಸಿದ್ದಾನೆ. ಬಿರುಗಾಳಿ ಸಹಿತ ಗುಡುಗು, ಸಿಡಿಲಿನ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಮಳೆಗೆ ಅಂಗಡಿ-ಮುಂಗಟ್ಟುಗಳ ಆಸರೆ ಪಡೆದುಕೊಂಡರು. ಇತ್ತ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಗೆ ಹಲವು ಮನೆಗಳ ಚಾವಣಿ ಹಾರಿಹೋಗಿದ್ದು, ಪ್ರವಾಸಿಗರ ವಾಹನಗಳು ಜಖಂಗೊಂಡಿದೆ.
ಕಾಂಪೌಂಡ್ ಕುಸಿದು ಬೈಕ್‌ಗಳು ಜಖಂ
ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಶಾಹಿ ಗಾರ್ಮೆಂಟ್ಸ್ ಬಳಿಯ ಕಾಂಪೌಂಡ್ ಕುಸಿದು ಬೈಕ್‌ಗಳು ಜಖಂಗೊಂಡಿದೆ. ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರು ಕಾಂಪೌಂಡ್ ಬಳಿ ಬೈಕ್ ಅನ್ನು ನಿಲ್ಲಿಸುತ್ತಿದ್ದರು. ಸೋಮವಾರವೂ ಎಂದಿನಂತೆ ಬೈಕ್‌ಗಳನ್ನ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಭಾರಿ ಮಳೆಗೆ ಕಾಂಪೌಂಡ್ ಕುಸಿದಿದೆ. ಪರಿಣಾಮ ಬೈಕ್‌ಗಳು ಸಂಪೂರ್ಣ ಜಖಂಗೊಂಡಿದೆ.
ಸ್ಪಷ್ಟನೆ ನೀಡಿದ ಶಾಸಕರು
ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಆದರೆ ನೂತನ ಶಾಸಕರು ಇತ್ತ ಗಮನ ನೀಡುತ್ತಿಲ್ಲ ಎಂಬ ಆರೋಪಗಳಿಗೆ ಶಾಸಕ ವೀರೇಂದ್ರ ಪಪ್ಪಿ ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಶಾಸಕ ವೀರೇಂದ್ರ ಪಪ್ಪಿ, ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ವೀರೇಂದ್ರ ಪಪ್ಪಿ ಅಭಿಮಾನಿಗಳ ಬಳಗದವರು ನೆರವಾಗಿದ್ದಾರೆ. ಸಮಾರು 500ಕ್ಕೂ ಹೆಚ್ಚು ಯುವಕರು ತೊಂದರೆಗಳನ್ನು ನಿವಾರಿಸಲು ಸತತ ಮೂರು ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದಾರೆ. ಅಧಿಕಾರಿಗಳೂ ಕೂಡ ಈ ವೇಳೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: Crime News : ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡ ಯುವತಿ; ಆತ್ಮಹತ್ಯೆಗೆ ಕಾರಣ ಏನು?
ಮಳೆಯಿಂದ ಮನೆಯೊಳಗೆ ನೀರು ಹೋಗಿ ಹಾನಿಗೊಳಗಾದವರ ಮನೆಯ ಸ್ವಚ್ಛತೆಯನ್ನೂ ನಮ್ಮ ಯುವಕರು ಮಾಡಿದ್ದಾರೆ. ನಾನು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ. ಮಂಗಳವಾರದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ