Site icon Vistara News

Rain News : ಜಲಪಾತದಲ್ಲಿ ಕಾಲು ಜಾರಿದ ಯುವಕನ ಶವ ಇನ್ನೂ ಪತ್ತೆ ಇಲ್ಲ; ಹುಡುಕಲು ಹೋದ ಸಾಹಸಿಗೂ ಡೇಂಜರ್

Arashina gundi Falls

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು (Kolluru incident) ಬಳಿಯಿರುವ ಅರಶಿನಗುಂಡಿ ಜಲಪಾತ (Arashina gundi Falls) ನೋಡಲು ಹೋಗಿ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂಬ ಯುವಕನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ, ಮಳೆಯ ಅಬ್ಬರದ ಮಧ್ಯೆಯೂ (Rain News) ಯುವಕನ ಮೃತದೇಹ ಪತ್ತೆ ಮಾಡುವ ಉತ್ಸಾಹದಿಂದ ಹೋದ ಸಾಮಾಜಿಕ ಕಾರ್ಯಕರ್ತರೊಬ್ಬರು (Social worker) ತಾವೇ ಅಪಾಯಕ್ಕೆ ಸಿಲುಕುವ ಸೂಚನೆ ಕಂಡು ಮರಳಿ ಬಂದಿದ್ದಾರೆ.

ಭದ್ರಾವತಿ ಮೂಲದ ಶರತ್ ಕುಮಾರ್ (23) ಅವರು ಸ್ನೇಹಿತರ ಜತೆ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದರು. ಇಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಆತ ಭೋರ್ಗರೆಯುತ್ತಿದ್ದ ಜಲಪಾತದ ಎದುರು ಕಲ್ಲಿನ ಅಂಚಿನಲ್ಲಿ ನಿಂತಿದ್ದ. ಈ ವೇಳೆ ಸಣ್ಣಗೆ ಕಾಲು ಜಾರಿದ್ದು ಯುವಕ ಅಲ್ಲಿಂದಲೇ ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪಿಎಸ್ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಕೂಡಾ ಸಹಕಾರ ನೀಡುತ್ತಿದ್ದಾರೆ.

ಶರತ್‌ ಕುಮಾರ್‌ ಉರುಳಿ ಬಿದ್ದಿದ್ದು ಹೀಗೆ

ಇದೊಂದು ಅತ್ಯಂತ ದುರ್ಗಮ ಜಲಪಾತವಾಗಿದ್ದು, ಮಳೆಯಿಂದಾಗಿ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನಿಂದ ಬೀಳುವ ನೀರು ಅತ್ಯಂತ ಕಿರಿದಾದ ಕಲ್ಲುಗಳ ಬಂಡೆಗಳ ನಡುವೆ ಇಳಿದುಹೋಗುತ್ತಿದೆ. ಕಲ್ಲುಗಳ ನಡುವೆ ವೇಗವಾಗಿ ತೆವಳಿಕೊಂಡು ಜಿಗಿದುಕೊಂಡು ನೀರು ಹಾರುತ್ತದೆ. ಇದರಿಂದಾಗಿ ಶರತ್‌ ಕುಮಾರ್‌ ಅವರ ಶವವನ್ನು ಎಲ್ಲಿ ಹುಡುಕುವುದು ಎಂದು ತಿಳಿಯದೆ ಅಗ್ನಿ ಶಾಮಕ ದಳ ಕೂಡಾ ಕೈಚೆಲ್ಲುವ ಹಂತಕ್ಕೆ ಬಂದಿದೆ.

ಪ್ರಯತ್ನಕ್ಕೆ ಇಳಿದ ಆಪತ್ಬಾಂಧವ ಈಶ್ವರ ಮಲ್ಪೆ

ಜಲಪಾತದಲ್ಲಿ ಕೊಚ್ಚಿಹೋದ ಯುವಕನನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಿಳಿಯದೆ ಅಗ್ನಿಶಾಮಕ ದಳ ಕಂಗಾಲಾಗಿದ್ದ ಹೊತ್ತಿನಲ್ಲಿ ಉಡುಪಿಯ ಸಾಹಸಿಯೊಬ್ಬರು ತಾವೊಂದು ಪ್ರಯತ್ನ ಮಾಡಿದರೆ ಹೇಗೆ ಎಂದು ಹೊರಟಿದ್ದರೆ ಆಪತ್ಬಾಂಧವ ಎಂದೇ ಹೆಸರಾದ ಈಶ್ವರ ಮಲ್ಪೆ.

ಈ ಹಿಂದೆಯೂ ಕೆಲವೊಂದು ಅಪಾಯಕಾರಿ ಸನ್ನಿವೇಶಗಳಲ್ಲಿ ಧೈರ್ಯದಿಂದ ಮುನ್ನುಗ್ಗಿ ಕಾರ್ಯಾಚರಣೆ ನಡೆಸಿದ್ದ ಈಶ್ವರ ಮಲ್ಪೆ ಅವರು ಈ ಬಾರಿಯೂ ಮುಂದಾಗಿದ್ದಾರೆ. ಹೀಗಾಗಿಯೇ ಹಗ್ಗ ಮತ್ತಿತರ ಸಲಕರಣೆಗಳೊಂದಿಗೆ ಗೆಳೆಯರೊಂದಿಗೆ ಮಳೆಯ ನಡುವೆಯೇ ಅಲ್ಲಿಗೆ ತೆರಳಿದ್ದರು.

ಅವರು ಶರತ್‌ ಎಲ್ಲಿ ಬಿದ್ದಿರಬಹುದು? ಶವ ಎಲ್ಲಿ ಸಿಕ್ಕಿ ಹಾಕಿಕೊಂಡಿರಬಹುದು ಎಂದು ಯೋಚಿಸಿ ಒಂದು ಕಡೆ ಕಡಿದಾದ ಜಾಗದಲ್ಲಿ ಇಳಿದು ಹುಡುಕಾಟಕ್ಕೆ ಇಳಿದರು. ಅಲ್ಲಿ ಅವರು ಒಂದು ಕಡೆ ನೀರ ನಡುವಿನಿಂದ ಕೆಳಗಿನಿಂದ ಮೇಲೆ ಕಲ್ಲಿಗೆ ಕೈ ಇಟ್ಟು ಜಿಗಿದು ಹತ್ತಲು ಮುಂದಾದರು.

ಈ ವೇಳೆ ಅವರು ಕೈ ಜಾರಿ ಕಾಲೂ ಜಾರಿ ಕೆಳಗೆ ನೀರಿಗೆ ಬಿದ್ದಿದ್ದಾರೆ. ಆಗ ಅವರ ಗೆಳೆಯರು ಯಾವ ಕಾರಣಕ್ಕೂ ಈ ಸಾಹಸ ಬೇಡ ಮರಳಿ ಬನ್ನಿ ಎಂದು ಒತ್ತಡ ಹೇರಿ ಮೇಲೆ ಕರೆದುಕೊಂಡುಬಂದಿದ್ದಾರೆ. ಹೀಗಾಗಿ ಅವರು ಕೂಡಾ ಶರತ್‌ ಕುಮಾರ್‌ ಸುಳಿವು ಸಿಕ್ಕದೆ ಮರಳಿಬಂದಿದ್ದಾರೆ.

ಈಶ್ವರ ಮಲ್ಪೆ ಅವರು ಕೆಳಗೆ ಬಿದ್ದ ವಿಡಿಯೊ ಇಲ್ಲಿದೆ

ಜಲಪಾತ ನೋಡಲು ಹೋಗುವಾಗ ಎಚ್ಚರ

  1. ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಎಲ್ಲ ಕಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಹಾಗೂ ಜಲಪಾತಗಳು ತುಂಬಿ ಹರಿಯುತ್ತಿವೆ.
  2. ಜಲಪಾತಗಳ ಬಳಿಗೆ ತೆರಳಬೇಕಿದ್ದರೆ ಎಚ್ಚರಿಕೆಯಿಂದಿರಿ.
  3. ಸೆಲ್ಫಿ ತೆಗೆದುಕೊಳ್ಳುವುದು, ಜಲಪಾತದ ತೀರ ಸಮೀಪಕ್ಕೆ ಹೋಗುವುದು, ನೀರು ಬಿದ್ದು ಜಾರುತ್ತಿರುವ ಕಡೆಗಳಲ್ಲಿ ಕಾಲಿಡುವುದು ಮುಂತಾದ ಹುಚ್ಚಾಟಗಳು ಬೇಡ ಎಂದು ಪೊಲೀಸ್‌ ಇಲಾಖೆ ಹಾಗೂ ಅರಖ್ಯ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: Rain News : ಬೀದರ್‌ನಲ್ಲೂ ಭಾರಿ ಮಳೆ; ಉಕ್ಕಿಹರಿದ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

Exit mobile version