Site icon Vistara News

ಉಕ್ಕಿದ ನದಿಯಿಂದ ಸಂಪರ್ಕ ಕಡಿತ, ನಿವೃತ್ತ ನರ್ಸ್‌ ನೆರವಿನಿಂದ ಪಿಎಚ್ಸಿಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

Avali makkalu

ಬಳ್ಳಾರಿ: ವೇದಾವತಿ ನದಿ ನೀರಿನ ಪ್ರವಾಹದಿಂದಾಗಿ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮುಳುಗಡೆಯಾಗಿ ತಾಲೂಕು ಕೇಂದ್ರದಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಮಹಿಳೆಯೊಬ್ಬರು ಹೆರಿಗೆಗಾಗಿ ಕಷ್ಟಪಟ್ಟರೂ ಕೊನೆಗೆ ನಿವೃತ್ತ ನರ್ಸ್‌ ಒಬ್ಬರ ಸಹಾಯದಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದರು.
ರಾರಾವಿಯ ಶಿಲ್ಪ ಎಂಬವರೇ ಈ ರೀತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಹೆರಿಗೆಗೆ ಸಹಾಯ ಮಾಡಿದ ನಿವೃತ್ತ ನರ್ಸ್‌ ಹೆಸರು ಗಾಯತ್ರಿ ಬಾಯಿ. ಅವರ ಸಕಾಲಿಕ ನೆರವನ್ನು ರಾರಾವಿ ಕೊಂಡಾಡುತ್ತಿದೆ.

ಸಿರುಗುಪ್ಪ ತಾಲೂಕಿನ ಬೆಳಗಲ್ ಗ್ರಾಮದ ಶಿಲ್ಪ ಅವರಿಗೆ ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ, ಅವರನ್ನು ಸಿರುಗುಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ, ರಾರಾವಿ ಸೇತುವೆ ಮೇಲೆ ನೀರು ಹರಿದು ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಶಿಲ್ಪ ಅವರು ಗಂಡ ಮತ್ತು ಪೋಷಕರು ಆತಂಕಗೊಂಡಿದ್ದಾರೆ. ಗರ್ಭದಲ್ಲಿ ಅವಳಿ ಮಕ್ಕಳಿರುವುದರಿಂದ ಹೆರಿಗೆಯನ್ನು ನುರಿತ ತಜ್ಞರಿಂದಲೇ ಮಾಡಿಸಬೇಕಾಗಿತ್ತು. ಆದರೂ ಅನಿವಾರ್ಯವಾಗಿ, ಧೈರ್ಯ ಮಾಡಿ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈ ವಿಷಯ ತಿಳಿದ ಸಿರುಗುಪ್ಪ ತಾಲೂಕು ವೈದ್ಯಾಧಿಕಾರಿ ಈರಣ್ಣ ಅವರು ಕೂಡಲೇ ಇತ್ತೀಚೆಗೆ ನಿವೃತ್ತರಾಗಿರುವ ನರ್ಸ್ ಮತ್ತು ಫಾರ್ಮಸಿ ಅಧಿಕಾರಿಯಾದ ಬಸವರಾಜ್ ಅವರ ಪತ್ನಿ ಗಾಯತ್ರಿ ಬಾಯಿ ಅವರಿಗೆ ಮಾಹಿತಿ ನೀಡಿದ್ದಾರೆ. ಗಾಯತ್ರಿಯವರು ಕೂಡಲೇ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಶಿಲ್ಪ ಅವರಿಗೆ ಹೆರಿಗೆಯನ್ನು ಸುಸೂತ್ರವಾಗಿ ಮಾಡಲು ಯಶಸ್ವಿಯಾಗಿದ್ದಾರೆ.

ಹಸಿರು ಅಂಚಿನ ಹಳದಿ ಸೀರೆ ಉಟ್ಟವರೇ ಸುಸೂತ್ರವಾಗಿ ಹೆರಿಗೆ ಮಾಡಿಸಿದ ನಿವೃತ್ತ ನರ್ಸ್‌. ಅವರ ಜತೆಗೆ ಬಾಣಂತಿ ಶಿಲ್ಪ ಮತ್ತು ಆಸ್ಪತ್ರೆ ಸಿಬ್ಬಂದಿ

ಗಂಡು ಅವಳಿ ಮಕ್ಕಳಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ, ನಿವೃತ್ತಿಯಾಗಿರುವ ನರ್ಸ್ ಗಾಯತ್ರಿ ಬಾಯಿ ಅವರು ಸಮಯಪ್ರಜ್ಞೆಯಿಂದಲೇ ಗಂಡಾಂತರ ಹೆರಿಗೆ ಯಾವುದೇ ಸಮಸ್ಯೆ ಇಲ್ಲದೆ ಆಗಿದೆ. ನರ್ಸ್ ಅವರ ಕಾರ್ಯಕ್ಕೆ ಶಿಲ್ಪ ಕುಟುಂಬದವರು, ಸಾರ್ವಜನಿಕರು ಮತ್ತು ತಾಲೂಕು ಆರೋಗ್ಯಾಧಿಕಾರಿ ಈರಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Rain News | ವೇದಾವತಿ ನದಿ ಪ್ರವಾಹದ ವೇಳೆ ಶನಿ ದೇವಸ್ಥಾನದಲ್ಲಿ ಸಿಲುಕಿದ್ದ ಅರ್ಚಕರು ಸೇರಿ ಏಳು ಜನರ ರಕ್ಷಣೆ

Exit mobile version