Site icon Vistara News

Rain News | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ; 69 ಗ್ರಾಮಗಳಿಗೆ ಜಲದಿಗ್ಬಂಧನ ಆತಂಕ!

Rain News

ಬಾಗಲಕೋಟೆ: ಸತತ ಮಳೆಯಿಂದ (Rain News) ಘಟಪ್ರಭಾ ‌ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಜಿಲ್ಲೆಯ ಮುಧೋಳ‌, ರಬಕವಿ ಬನಹಟ್ಟಿ, ಬಾಗಲಕೋಟೆ, ಬೀಳಗಿ ತಾಲೂಕುಗಳ ನದಿ ತೀರದ 69 ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಮುಧೋಳ ತಾಲೂಕಿನ ಹಲವು ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಜಲಾವೃತವಾಗಿವೆ. ಮಿರ್ಜಿ, ಚನ್ನಾಳ, ಜಾಲಿಬೇರ, ಜೀರಗಾಳ, ಇಂಗಳಗಿ, ಜಂಬಗಿ ಕೆಡಿ, ಕಸಬಾ ಜಂಬಗಿ ಸೇತುವೆಗಳು ಜಲಾವೃತವಾಗಿರುವುದರಿಂದ ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ | ಶಾಸಕರಿಗೆ ಬ್ಯಾಗ್‌ನಲ್ಲಿ ಕೊಟ್ಟಿದ್ದು ದುಡ್ಡಲ್ಲ, ಸೀಬೆ ಹಣ್ಣು!: PSI ಹಗರಣಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದ ಪರಸಪ್ಪ

ಘಟಪ್ರಭಾ ನದಿ ಅಬ್ಬರಕ್ಕೆ ಮುಧೋಳ ತಾಲೂಕಿನ ಮಿರ್ಜಿ ಘಟಪ್ರಭಾ ಸೇತುವೆ ಜಲಾವೃತವಾಗಿದ್ದು, ಸೇತುವೆ ಮೇಲೆ ಐದು ಅಡಿಯಷ್ಟು ನೀರು ಹರಿಯುತ್ತಿದೆ. ಹೀಗಾಗಿ ಮಿರ್ಜಿ ಮಹಾಲಿಂಗಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ನದಿ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಬೆಳೆ ಜಲಾವೃತವಾಗಿದೆ.

ದೇಗುಲಕ್ಕೆ ಜಲದಿಗ್ಬಂಧನ
ಮುಧೋಳ ತಾಲೂಕಿನ ಮಾಚಕನೂರಿನಲ್ಲಿ ಘಟಪ್ರಭಾ ನದಿ ದಡದಲ್ಲಿ ಇರುವ ಇತಿಹಾಸ ಪ್ರಸಿದ್ಧ ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಂದಿದ್ದಾಗಲೂ ದೇಗುಲ ಜಲಾವೃತವಾಗಿತ್ತು. ಈಗ ಒಂದು ತಿಂಗಳ ಅಂತರದಲ್ಲಿ ಮತ್ತೆ ಪ್ರವಾಹ ಉಂಟಾಗಿ ದೇಗುಲ ಸುತ್ತ ನೀರು ನಿಂತಿದೆ.

ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಘಟಪ್ರಭಾ ನದಿಯ ಆರ್ಭಟದ ಹಿನ್ನೆಲೆಯಲ್ಲಿ ಮುಧೋಳ ತಾಲೂಕಿನ ನದಿ ತೀರದ ಗ್ರಾಮಗಳ ಜನರು, ಜಾನುವಾರು ಹಾಗೂ ಸಾಮಗ್ರಿಗಳ ಜತೆ ಸುರಕ್ಷಿತ ಸ್ಥಳಗಳಿಗೆ ತೆರಳಲು ತಾಲೂಕು ಆಡಳಿತದಿಂದ ಎಚ್ಚರಿಕೆ ನೀಡಲಾಗಿದೆ. ಘಟಪ್ರಭಾ ಜಲಾಶಯದಿಂದ ಸದ್ಯ 52 ಸಾವಿರ ಕ್ಯೂಸೆಕ್ ನೀರಿನ ಹೊರ ಹರಿವು ಇದ್ದು, 60 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಬಿಟ್ಟರೆ ಮುಧೋಳ ತಾಲೂಕಿನ ಕೆಲ ಗ್ರಾಮಗಳಿಗೆ ನೀರು ನುಗ್ಗಲಿದೆ, ಹೀಗಾಗಿ ಘಟಪ್ರಭಾ ನದಿ ತೀರದ ಜನರಿಗೆ ಪ್ರವಾಹ ಭೀತಿ ಉಂಟಾಗಿದೆ.

ಘಟಪ್ರಭಾ ನದಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು
ಜಿಲ್ಲೆಯ ಮುಧೋಳ ತಾಲೂಕಿನ ಗ್ರಾಮ ಒಂಟಗೋಡಿ ಗ್ರಾಮದಲ್ಲಿ ಪಂಪ್‌ಸೆಟ್‌ ತರಲು ಹೋಗಿ ಘಟಪ್ರಭಾ ನದಿ ಹಿನ್ನೀರಿನಲ್ಲಿ ಮುಳುಗಿ ಯುವಕ ಮಂಗಳವಾರ ಮೃತಪಟ್ಟಿದ್ದಾನೆ. ವಿಜಯ್ ಬಿರಾದಾರ (19) ಮೃತ ಯುವಕ. ಮುಧೋಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಶವವನ್ನು ಪತ್ತೆ ಹಚ್ಚಲಾಗಿದೆ. ದೊಡ್ಡಪ್ಪ ವೆಂಕಣ್ಣ ಎಂಬುವವರ ಜತೆ ಪಂಪ್‌ಸೆಟ್‌ ತರಲು ಹೋಗಿದ್ದಾಗ ದುರ್ಘಟನೆ ನಡೆದಿದೆ.

ಇದನ್ನೂ ಓದಿ | ಸಿದ್ದರಾಮಯ್ಯ ಬೋಟ್‌ನಲ್ಲಿ ಹೋದಾಗ ಎಷ್ಟು ನೀರಿತ್ತು?: ಮೊಣಕಾಲುದ್ದ ನೀರಿಗೆ ಇದು ಬೇಕಿತ್ತ ಎಂದ ಸಿಎಂ

Exit mobile version