Site icon Vistara News

Rain News | ರಾಜ್ಯಾದ್ಯಂತ ವರುಣನ ಆರ್ಭಟ: ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ ಪತ್ತೆಗಾಗಿ ತೀವ್ರ ಶೋಧ

Rain News

ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಂಗಳವಾರ (ಜು.೫) ಸಹ ತನ್ನ ಅಬ್ಬರವನ್ನು ಮುಂದುವರಿಸಿದೆ. ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರದಿಂದ (ಜು.೩) ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರುಣನ ಆರ್ಭಟಕ್ಕೆ ಅನಾಹುತಗಳು ಹೆಚ್ಚಾಗುತ್ತಿವೆ. ಇನ್ನು ಸೋಮವಾರ ಚಿಕ್ಕಮಗಳೂರಲ್ಲಿ ಕೊಚ್ಚಿಹೋಗಿದ್ದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮಳೆಯಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗಾಗಿ ತೀವ್ರ ಹುಡುಕಾಟ

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುಪ್ರೀತಾ (6) ಸೋಮವಾರ (ಜು.೪) ಅಣ್ಣನ ಜತೆ ಶಾಲೆ ಮುಗಿಸಿ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಇದೀಗ ಬಾಲಕಿಯ ಪತ್ತೆಗಾಗಿ ಅಗ್ನಿಶಾಮಕ ದಳದ ಆರು ತಂಡಗಳಿಂದ ಕಾರ್ಯಾಚರಣೆ ಮುಂದುವರಿದಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯಿಂದಲೂ ಕಾರ್ಯಾಚರಣೆಗೆ ಸಾಥ್ ನೀಡಿದ್ದು, ಬಾಲಕಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಕಾಫಿನಾಡಿನ ಮಲೆನಾಡ ಭಾಗದಲ್ಲಿಯೂ ಮಳೆ ಮುಂದುವರಿದಿದ್ದು, ಗಾಳಿ-ಮಳೆಗೆ ಮರ ಬಿದ್ದು ಮನೆಯೊಂದು ಸಂಪೂರ್ಣ ಜಖಂಗೊಂಡಿದೆ. ಮುಂಜಾನೆ 4.30ರ ಹೊತ್ತಿಗೆ ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದ ಕೂಲಿ ಕಾರ್ಮಿಕ ಕ್ಲೆಮೆಂಡ್ ಡಿಸೋಜ ಎಂಬುವರ ಮನೆ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಅನಾಹುತದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Rain News | ಮಳೆಯ ಅಬ್ಬರ, ಗುಡ್ಡ ಕುಸಿತ; ಗೋವಾ, ಕರ್ನಾಟಕ ಸಂಚಾರ ಸ್ಥಗಿತ

ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ

ಚಿಕ್ಕಮಗಳೂರು ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ಮಂಗಳವಾರ (ಜು.5) ಭಾರಿ ಮಳೆಯಿಂದಾಗಿ ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಪಟ್ಟಣದ ಗಾಂಧಿ ಮೈದಾನ ಸಂಪೂರ್ಣ ಮುಳುಗಡೆ ಆಗಿದೆ. ನದಿ ತಟದ ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಶಾರದಾಂಬೆ ದೇವಾಲಯಕ್ಕೆ ತೆರಳುವ ರಸ್ತೆಗಳು ಮುಳುಗಡೆ ಆಗಿವೆ.

ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತುಂಗಾ ನದಿ ತಟದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಜನ ಜೀವನಕ್ಕೆ ತೊಂದರೆಯಾಗಿದೆ.

ಇದನ್ನೂ ಓದಿ | Earthquake in Karnataka |ವಿಜಯಪುರ, ಕೊಡಗು, ಮಂಗಳೂರಿನಲ್ಲಿ ಮತ್ತೆ ಅದುರಿದ ಭೂಮಿ

ಭೂಮಿ ಕಂಪಿಸಿದ ಭಾಗದಲ್ಲಿ ಉರುಳಿದ ಬಂಡೆ ಕಲ್ಲು

ಕೊಡಗಿನ ತಲಕಾವೇರಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬಿದ್ದ ಹಿನ್ನೆಲೆಯಲ್ಲಿ ಬಂಡೆ ಕಲ್ಲು ರಸ್ತೆಗೆ ಉರುಳಿದೆ. ಭೂಮಿ ಕಂಪಿಸಿದ ಭಾಗದಲ್ಲಿ ಬೆಟ್ಟದ ಮೇಲಿಂದ ದೊಡ್ಡ ಕಲ್ಲುಗಳು ಉರುಳಿದ್ದು, ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಇದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ.

ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಇಳಿಕೆ ಕಂಡಿದೆ. ಸೋಮವಾರ (ಜು.೪) ರಾತ್ರಿಯಿಂದ ಬ್ರಹ್ಮಗಿರಿ ತಪ್ಪಲಲ್ಲಿ ಮಳೆ ಕಡಿಮೆಯಾಗಿದ್ದು, ಭಾಗಮಂಡಲದಲ್ಲಿ ನದಿ ನೀರಿನ ಮಟ್ಟ ಇಳಿಕೆ ಕಂಡಿದೆ. ನಾಪೋಕ್ಲು ಭಾಗಮಂಡಲ ರಸ್ತೆ ಮೇಲೆ ಇನ್ನೂ ಒಂದು ಅಡಿ ನೀರು ನಿಂತಿದೆ.

ಮಳೆಯಿಂದಾಗಿ ತುಂಗಾ ಮಂಟಪ ಮುಳುಗಡೆ

ಶಿವಮೊಗ್ಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ತುಂಗಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸೋಮವಾರ ರಾತ್ರಿ (ಜು.೪) ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಿದ್ದು, ಒಳಹರಿವಿನಷ್ಟೇ ನೀರನ್ನು ಜಲಾಶಯದಿಂದ ಸೋಮವಾರ (ಜು.೪) ರಾತ್ರಿ 43359 ಕ್ಯೂಸೆಕ್ ನೀರು ಹೊರಕ್ಕೆ ಹಾಕಲಾಗಿದೆ.

ಶೃಂಗೇರಿ, ಕಿಗ್ಗಾ ಭಾಗದಲ್ಲಿ ಕೂಡ ಮಳೆಯಾಗಿದ್ದು, ತುಂಗಾ ಮಂಟಪ ಮುಳುಗಿದೆ. ನದಿ ತೀರದಲ್ಲಿರುವ ಮಂಟಪವಾಗಿದ್ದು, ಜಿಲ್ಲೆಯ ಪಾಲಿಕೆಯಿಂದ ನದಿ ತೀರದ ಜನತೆಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಮಹಾನಗರ ಪಾಲಿಕೆಯಿಂದ ಸಹಾಯವಾಣಿ ತೆರೆದಿದ್ದು, ಸಮಸ್ಯೆಯಾದಲ್ಲಿ 1800425767 ನಂಬರ್‌ಗೆ ಸಂಪರ್ಕಿಸಲು ಪಾಲಿಕೆ ಸಾವರ್ಜನಿಕರಲ್ಲಿ ಮನವಿ ಮಾಡಿದೆ.

ಶಾಲೆ ಹಾಗೂ ಕಾಲೇಜುಗಳಿಗೆ ಒಂದು ದಿನದ ರಜೆ

ಉತ್ತರಕನ್ನಡ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಲ್ಲದೇ ಜುಲೈ 8ರ ವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿರುವ ಅಂಗನವಾಡಿ, ಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ರೀತಿಯ ಶೈಕ್ಷಣಿಕ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮಳೆ ಹೀಗೆ ಮುಂದುವರಿದಲ್ಲಿ ರಜೆಯನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ | Weather Report: ರಾಜ್ಯದಲ್ಲಿ ಇನ್ನೆರಡು ದಿನ ಅಬ್ಬರಿಸಲಿರುವ ಮಳೆರಾಯ

ಈಗಾಗಲೇ ಜಿಲ್ಲೆಯ ವಿವಿಧೆಡೆ ಎಡಬಿಡದೇ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಸಾಕಷ್ಟು ಅವಘಡಗಳು ಸಂಭವಿಸಿದ್ದು, ಹಲವೆಡೆ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸೇತುವೆ, ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಬೃಹತ್ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೃಹತ್ ಮರ ರಸ್ತೆಗುರುಳಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಂಗಳೂರು ಹೊರವಲಯದ ಮಾಡೂರು ಬಳಿ ಮರ ಉರುಳಿದ್ದು, ಬೀರಿಯಿಂದ ದೇರಳಕಟ್ಟೆ ಸಂಪರ್ಕಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್‌ ಕೇಬಲ್‌ ಲೈನ್‌ ಮೇಲೆ ಮರ ಉರುಳಿ ಮಂಗಳವಾರ ಬೆಳಗ್ಗೆ (ಜು. ೫)ಯಿಂದ ವಿದ್ಯುತ್ ಸಂಚಾರ ವ್ಯತ್ಯಯಗೊಂಡಿದೆ.

25 ವರ್ಷಗಳ ನಂತರ ಜಲಾವೃತವಾಗಿರುವ ದೇವಿಪುರ ರಸ್ತೆ

ಭಾರಿ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ತಲಪಾಡಿ ದೇವಿಪುರ, ಕೋಟೆಕಾರು ವೈದ್ಯನಾಥನಗರದಲ್ಲಿ ಹಲವು ಮನೆಗಳು, ಸೋಮೇಶ್ವರ ಒಂಭತ್ತು ಕೆರೆಯ ಭಾಗದಲ್ಲಿ ಮನೆಗಳು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಜುಲೈ 6 ಮತ್ತು 7ರಂದು ವ್ಯಾಪಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಿಸಿದೆ. ಬೀದರ್, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಬಾರಿ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 5 ಮತ್ತು ಜಲೈ 6 ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜುಲೈ 7ರವರೆಗೆ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ | Weather Report | ಕರಾವಳಿಯಲ್ಲಿ ಜುಲೈ 8ರ ವರೆಗೂ ಗುಡುಗು ಸಹಿತ ಭಾರಿ ಮಳೆ; ಮೀನುಗಾರರಿಗೆ ಎಚ್ಚರಿಕೆ

Exit mobile version