ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಮುಂದುವರಿದಿದೆ. ಸುಮಾರು ೧೫ ಜಿಲ್ಲೆಗಳು ಒಮ್ಮಿಂದೊಮ್ಮೆಗೇ ಸುರಿಯವ, ಪ್ರವಾಹ ಸೃಷ್ಟಿಸುವ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ, ಮಳೆಯ ಹೊಡೆತ, ಕುಸಿಯುವ ಮನೆಗಳು, ಪ್ರವಾಹ, ಸಿಡಿಲ ಹೊಡೆತ ಮತ್ತು ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರು ಪೊಲೀಸರು ಸೇರಿದಂತೆ ಎಂಟು ಮಂದಿ ಮಂಗಳವಾರ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಪೊಲೀಸರು
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಇಬ್ಬರು ಪೊಲೀಸರು ಕೊಚ್ಚಿ ಹೋಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಹೇಶ ಹಾಗೂ ನಿಂಗಪ್ಪ ಅವರನ್ನು ಗಜೇಂದ್ರಗಡದಲ್ಲಿ ನಡೆಯುವ ಗಣೇಶ ವಿಸರ್ಜನೆಯ ಬಂದೋಬಸ್ತ್‌ಗೆ ನೇಮಕ ಮಾಡಲಾಗಿತ್ತು. ಅವರು ನಾಪತ್ತೆಯಾಗಿದ್ದು, ಹಳ್ಳದ ಬಳಿ ಅವರ ಮೊಬೈಲ್ ಲೊಕೇಶನ್ ಅಂತ್ಯಗೊಂಡಿತ್ತು. ನೀರಿನಲ್ಲಿ ಹುಡುಕಿದಾಗ ಒಂದು ಕಿ.ಮೀ. ದೂರದಲ್ಲಿ ಒಬ್ಬರ ಶವ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಪ್ರಾಣ ಕಳೆದುಕೊಂಡ ಯುವತಿ
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ, ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ಖಾಸಗಿ ಕಾಲೇಜೊಂದರ ಉದ್ಯೋಗಿ ಅಖಿಲಾ (೨೩) ಎಂಬವರು ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ತಮ್ಮ ಹೋಂಡಾ ಆ್ಯಕ್ಟಿವಾ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ನೀರಿನಲ್ಲಿ ಮುಂದೆ ಸಾಗಲಾಗದೆ ಬೀಳುವ ಹಂತ ಬಂದಾಗ ವಿದ್ಯುತ್ ಕಂಬವೊಂದನ್ನು ಆಧರಿಸಿ ನಿಂತಿದ್ದೇ ಆಕೆ ಶಾಕ್‌ಗೆ ಒಳಗಾಗಿ ಪ್ರಾಣ ಕಳೆದುಕೊಂಡರು.
ಸಿಡಿಲಿಗೆ ಇಬ್ಬರು ರೈತರು, ಒಬ್ಬ ಕುರಿಗಾಹಿ ಬಲಿ
ಚಾಮರಾಜನಗರದ ಯಳಂದೂರು ತಾಲೂಕಿನ ಕೆಸ್ತೂರಿನಲ್ಲಿ ರೇವಣ್ಣ ಎಂಬ ರೈತರೊಬ್ಬರು ಜಮೀನಿನಲ್ಲಿ ಭತ್ತ ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಾಟಾಪುರ ಗ್ರಾಮದ ನಿವಾಸಿಯಾಗಿರುವ ಸಣ್ಣನೀಲಪ್ಪ ಹಾದಿಮನಿ (೫೫) ಅವರು ಹೊಲದಲ್ಲಿದ್ದಾಗ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ನಲ್ಲಿ ಸಿಡಿಲು ಬಡಿದು ಕುರಿಗಾಹಿ ಎಸ್. ಮಾದಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಅವರ ಜತೆಗೆ ೧೦ಕ್ಕೂ ಅಧಿಕ ಕುರಿಗಳೂ ಪ್ರಾಣ ಕಳೆದುಕೊಂಡಿವೆ.
ಗೋಡೆ ಕುಸಿದು ಮಲಗಿದಲ್ಲೇ ಮಹಿಳೆ ಮೃತ್ಯು
ಶಿವಮೊಗ್ಗದ ಮಲವಗೊಪ್ಪದ ಇಂದಿರಾನಗರ ಬಡಾವಣೆಯಲ್ಲಿ ಮನೆಯ ಗೋಡೆ ಕುಸಿದು ಗೌರಮ್ಮ (೬೯) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅವರು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮನೆ ಗೋಡೆ ಕುಸಿದು ಬಿದ್ದಿದೆ.
ಮನೆ ಕುಸಿದು ಯುವಕ ಸಾವು
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಬಸವನಗೌಡ ಶಿವನಗೌಡ ತಿಪ್ಪಣ್ಣನವರ (35) ಎಂಬವರು ಮನೆ ಚಾವಣಿ ಬಿದ್ದು ಮೃತಪಟ್ಟರು. ಅವರು ತಮ್ಮ ಹೆತ್ತವರನ್ನು ಬೇರೆ ಕಡೆಗೆ ಬಿಟ್ಟು ಬಂದಾಗ ಚಾವಣಿಯೇ ಉರುಳಿ ಬಿದ್ದು ದುರಂತ ನಡೆದಿದೆ.
ಇದನ್ನೂ ಓದಿ | ಬೆಂಗಳೂರು ಮಹಾಮಳೆಗೆ ಯುವತಿ ಬಲಿ | ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯದಿಂದ ಹೋಯ್ತು ಜೀವ