ಮಂಗಳೂರು/ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ರುದ್ರ ನರ್ತನದಿಂದ (Rain news) ಬದುಕು ಮೂರಾಬಟ್ಟೆಯಾಗಿದೆ. ಇಡೀ ಕರಾವಳಿಯನ್ನು ಮಳೆ (Heavy rain in Coastal and Malenadu) ಆಪೋಷನ ಪಡೆದಿದ್ದು ಎಲ್ಲೆಂದರಲ್ಲಿ ಜಲರಾಶಿಯೇ ಕಂಡುಬರುತ್ತಿದೆ. ಈ ನಡುವೆ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಮತ್ತು ರಸ್ತೆ ಕುಸಿತವೂ ಆರಂಭವಾಗಿದ್ದು, ಅಪಾಯ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಲ್ಲಪ್ಪಳ್ಳಿಯಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತದ ಪರಿಣಾಮ ಸಂಚಾರ ಬಂದ್ ಆಗಿದೆ. ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲು ಮಣ್ಣು ತೆರವು ಕಾರ್ಯ ನಡೆದಿದೆ.
ಮುತ್ತುಕೋಡಿ ಬಳಿ ಕೂಡಾ ಗುಡ್ಡ ಕುಸಿದಿದ್ದು, ಇಲ್ಲೂ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಾವಿನಕಟ್ಟೆ-ಮಂಡೆಕೋಲು ಸಂಪರ್ಕ ಕಡಿತವಾಗಿದೆ.
ಕಳಸ ಕುದುರೆಮುಖ ಹೆದ್ದಾರಿಯಲ್ಲಿ ರಸ್ತೆ ಬಿರುಕು
ಚಿಕ್ಕಮಗಳೂರು: ಭಾರಿ ಮಳೆಯಿಂದಾಗಿ ಕಳಸ-ಕುದುರೆಮುಖ ಹೆದ್ದಾರಿಯಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಅದು ತೆರೆದುಕೊಳ್ಳುತ್ತಿದೆ. ಕಳೆದ ವರ್ಷವೂ ಇದೇ ಭಾಗದಲ್ಲಿ ರಸ್ತೆ ಕುಸಿತ ಕಾಣಿಸಿಕೊಂಡಿತ್ತು.
ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಇದು ಕಳಸ-ಕುದುರೆಮುಖ-ಮಂಗಳೂರು ಸಂಪರ್ಕಿಸುವ ರಸ್ತೆಯಾಗಿದ್ದು ಸಂಚಾರಕ್ಕೆ ತಡೆ ಒಡ್ಡಲು ಚಿಂತನೆ ನಡೆದಿದೆ.
ಧರೆ ಕುಸಿದು ಆರು ಮನೆಗಳಿಗೆ ಆತಂಕ
ಶೃಂಗೇರಿ ತಾಲೂಕಿನ ಮೆಗಲು ಬೈಲು ಗ್ರಾಮದಲ್ಲಿ ಮನೆಯ ಮುಂದಿನ ಧರೆ ಕುಸಿದು ಆರು ಮನೆಗಳಿಗೆ ಆತಂಕ ಎದುರಾಗಿದೆ.
ಗ್ರಾಮ ಪಂಚಾಯಿತಿಯಿಂದ ರಸ್ತೆ ನಿರ್ಮಾಣದ ವೇಳೆ ಮಣ್ಣು ತೆಗೆಯಲಾಗಿತ್ತು. ಇದೇ ರಸ್ತೆಯ ಮತ್ತೊಂದು ಕಡೆ ಭೂಮಿ ಕುಸಿದಿದೆ. ಎರಡರಿಂದ ಮೂರು ಕಡೆ ಭೂಮಿ ಬಿರುಕು ಬಿಟ್ಟಿದೆ.
ಸ್ಥಳಕ್ಕೆ ಶೃಂಗೇರಿ ತಹಸೀಲ್ದಾರ್ ಗೌರಮ್ಮ ಹಾಗೂ ಆರ್.ಐ ಜಗದೀಶ್ ಭೇಟಿ ನೀಡಿದ್ದಾರೆ.