Site icon Vistara News

Bangalore Rain | ರಾಜಧಾನಿಗೆ ಇನ್ನೂ 4 ದಿನ ಮಳೆ ಕಂಟಕ, ರಾಜ್ಯದೆಲ್ಲೆಡೆಯೂ ಇದೆ ವರುಣಾರ್ಭಟ

Bagalore Male from top

ಬೆಂಗಳೂರು: ಹಗಲು ಭಾರಿ ಬಿಸಿಲು, ಸಂಜೆಯಾಗುತ್ತಿದ್ದಂತೆಯೇ ಆಕಾಶ ಕಪ್ಪೇರಿ ಧೋ ಎಂದು ಸುರಿಯುವ ಮಹಾಮಳೆ. ಇದು ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ ಕಂಡುಬರುತ್ತಿರುವ ಸ್ಥಿತಿ. ರಾತ್ರಿಯಾಗುತ್ತಿದ್ದಂತೆಯೇ ಈ ರೀತಿ ಅಬ್ಬರಿಸುವ ಮಳೆಯ ಮಹಾ ಆರ್ಭಟ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ ಎನ್ನುವ ಮುನ್ಸೂಚನೆಯನ್ನು, ಎಚ್ಚರಿಕೆಯನ್ನು ನೀಡಿದ ಹವಾಮಾನ ಇಲಾಖೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂದಿನ ೪೮ ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ , ಕೆಲವೊಮ್ಮೆ ಭಾರಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಏನೇನು ಹೇಳುತ್ತದೆ ಮುನ್ಸೂಚನೆ?
ಸೆಪ್ಟೆಂಬರ್ ೮ರವರೆಗಿನ ರಾಜ್ಯದ ಮಳೆ ಮುನ್ಸೂಚನೆ ಪ್ರಕಾರ ಮುಂದಿನ 24 ಘಂಟೆಗಳು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ ೪೮ ಗಂಟೆಗಳಲ್ಲೂ ಸಾಕಷ್ಟು ಜಿಲ್ಲೆಗಳಲ್ಲಿ ಮಳೆ ಆರ್ಭಟವಿರಲಿದೆ. ಒಂದೆರಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಕೂಡಾ ಅಬ್ಬರಿಸಲಿದೆ.

ಭಾರಿ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 48 ಘಂಟೆಗಳು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಸೆಪ್ಟೆಂಬರ್‌ ೫ರಂದು ಮಳೆ ಹೇಗಿತ್ತು? (ಸೆಂ.ಮೀ.ಗಳಲ್ಲಿ)
ಸೆಪ್ಟೆಂಬರ್‌ ೫ರಂದು ಲೋಕಾಪುರ 16,ಅಣ್ಣಿಗೆರೆ (ಧಾರವಾಡ ಜಿಲ್ಲೆ) 15, ಗದಗ, ಬಾದಾಮಿ (ಬಾಗಲಕೋಟೆ ಜಿಲ್ಲೆ) ತಲಾ 12. ಬಾಗಲಕೋಟೆ, ಬಾಗಲಕೋಟೆ ಆಗ್ರೋ (ಬಾಗಲಕೋಟೆ ಜಿಲ್ಲೆ), ಶಿರಹಟ್ಟಿ, ಲಕ್ಷ್ಮೇಶ್ವರ (ಎರಡೂ ಗದಗ ಜಿಲ್ಲೆ) ತಲಾ 11, ಬೆಳ್ಳಟ್ಟಿ (ಗದಗ ಜಿಲ್ಲೆ), ರಬಕವಿ (ಬಾಗಲಕೋಟೆ ಜಿಲ್ಲೆ) ತಲಾ 9; ಬನವಾಸಿ (ಉತ್ತರ ಕನ್ನಡ ಜಿಲ್ಲೆ), ಕೆರೂರು (ಬಾಗಲಕೋಟೆ ಜಿಲ್ಲೆ), ಕುಂದಗೋಳ (ಧಾರವಾಡ ಜಿಲ್ಲೆ), ಎಲೆಕ್ಟ್ರಾನಿಕ್ ಸಿಟಿ ಆರ್ಗ್ (ಬೆಂಗಳೂರು ನಗರ ಜಿಲ್ಲೆ), ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ) ತಲಾ 8 ಸೆ .ಮಿ ಮಳೆ ದಾಖಲಾಗಿದೆ.

Exit mobile version