ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಯ (Rain News) ಆರ್ಭಟ ಮುಂದುವರಿದಿದೆ. ಮಂಗಳವಾರ (ಆ.2) ರಾತ್ರಿ ಆರಂಭಗೊಂಡ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹಲವು ಕಡೆ ಮರಗಳು ಧರೆಗೆ ಉರುಳಿವೆ.
ನಾಗರಬಾವಿಯಿಂದ ಬೆಂಗಳೂರು ಯೂನಿವರ್ಸಿಟಿಯತ್ತ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಬೆಳಗಿನ ಜಾವ ಬಿಬಿಎಂಪಿ ಮರವನ್ನು ತೆರವುಗೊಳಿಸಿದೆ.
ಹೆಣ್ಣೂರು ಬಳಿಯ ಸಾಯಿ ಲೇಔಟ್ ನಲ್ಲಿ ರಸ್ತೆಯಲ್ಲಿಯೇ ನೀರು ನಿಂತಿದೆ .ಕಟ್ಟಿರುವ ಮೋರಿಯಿಂದ ಮಣ್ಣು ತೆಗೆದು ಸಾರ್ವಜನಿಕರು ಹಾಗು ಬಿಬಿಎಂಪಿ ಸಿಬ್ಬಂದಿ ನೀರು ಹರಿ ಬಿಡುತ್ತಿದ್ದಾರೆ.
ಇದನ್ನೂ ಓದಿ| Rain news | ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ
ವಾರ್ಡ್ ನಂ. 25ರ ವಡ್ಡರಪಾಳ್ಯದಲ್ಲಿ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಮೀಪದಲ್ಲೆ ಕಾರ್ಪೋರೇಟರ್ ಮನೆ ಇದೆ. ಆದರೆ ಅದೇ ರಸ್ತೆಯ ಅಂಚಿನಲ್ಲಿರುವ ಜನ ಮಳೆ ನೀರಿನ ಸರಾಗ ಹರಿವಿನ ವ್ಯತ್ಯಯದಿಂದಾಗಿ ತೀವ್ರ ಪರದಾಟ ಅನುಭವಿಸಿದರು. ಕಾರ್ಪೋರೇಟರ್ ಮನೆಯವರೆಗೆ ಮಾತ್ರ ಡಾಂಬರು ಹಾಕಿಸಲಾಗಿದೆ. ಆದರೆ ಅದೇ ರಸ್ತೆ ಕನೆಕ್ಟ್ ಆಗುವ ಸ್ಥಳದಲ್ಲಿ ಡಾಂಬರು ಇಲ್ಲ! ಸರಿಯಾದ ನಿರ್ವಹಣೆ ಕೂಡ ಇಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ನಗರದ ಹಲವಾರು ಬಡಾವಣೆಗಳು, ತಗ್ಗು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದೆ. ಯಶವಂತಪುರ, ಶಿವಾನಂದ ವೃತ್ತ, ಮಹಾಲಕ್ಷ್ಮಿ ಲೇಜೌಟ್, ಶ್ರೀರಾಂಪುರ, ಗೊರಗುಂಟೆಪಾಳ್ಯ , ಪೀಣ್ಯ , ಯಲಹಂಕ, ಮಾಗಡಿ ರಸ್ತೆ, ಜಯನಗರ, ಶಿವಾಜಿನಗರ, ಕೆಂಗೇರಿ, ಹೆಬ್ಬಾಳ, ಬನಶಂಕರಿ, ಮೆಜೆಸ್ಟಿಕ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಭಾರಿ ಮಳೆಯಾಗಿದೆ.
ರಾಜರಾಜೇಶ್ವರಿ ನಗರ 7.2 ಸೆಂ.ಮೀ , ವಿದ್ಯಾಪೀಠ 6.15 ಸೆಂ.ಮೀ , ಆರ್.ಆರ್ ನಗರ, ಸಂಪಂಗಿರಾಮ ನಗರ 5.7 ಸೆಂ.ಮೀ , ರಾಜಮಹಲ್, ಗುಟ್ಟಹಳ್ಳಿ, ಬಾಣಸವಾಡಿ ಮತ್ತು ವೆನ್ಸಾರ್ ಪೇಟ್ 5.3 ಸೆಂ.ಮೀ, ದೊಡ್ಡನೆಕ್ಕುಂದಿ 5.2 ಸೆಂ.ಮೀ , ಉತ್ತರಹಳ್ಳಿ , ಕೆಂಗೇರಿ 4.5 ಸೆಂ.ಮೀ , ಕೋನೆನ ಅಗ್ರಹಾರ , ಎಚ್ ಎಎಲ್ ವಿಮಾನ ನಿಲ್ದಾಣ 4.5 ಸೆಂ.ಮೀ, ಪುಲಕೇಶಿ ನಗರ, ರಾಮಮೂರ್ತಿ ನಗರದಲ್ಲಿ 4.1 ಸೆಂ.ಮೀ ಮಳೆಯಾಗಿದೆ.
ಇದನ್ನೂ ಓದಿ | Rain News | ಭಾರಿ ಮಳೆಗೆ ರಾಜ್ಯದಲ್ಲಿ ಒಂದೇ ದಿನ 11 ಸಾವು; ಅಪಾರ ನಷ್ಟ