ಬೆಂಗಳೂರು: ನಗರದಲ್ಲಿ ಶನಿವಾರ (ಜು.30) ರಾತ್ರಿ ಎಡೆಬಿಡದೆ ಮಳೆ (Rain News) ಸುರಿದಿದೆ. ಮಳೆಯಿಂದಾಗಿ ಗೊರಗುಂಟೆಪಾಳ್ಯದಿಂದ ಯಶವಂತಪುರ ಸರ್ಕಲ್ ಕಡೆ ಬರುವ ರಸ್ತೆಯಲ್ಲಿ ಬಳಿ ಭಾರಿ ಗಾತ್ರದ ಮರ ಧರೆಗುರುಳಿದೆ. ಹಲವು ಮನೆಗಳಿಗೆ ನೀರು ನುಗಿ ಅವಾಂತರ ಸೃಷ್ಟಿಯಾಗಿದೆ.
ಯಲಚೇನಹಳ್ಳಿಯ ಕನಕನಗರದಲ್ಲಿ ಭಾರಿ ಮಳೆಯು ಕುಟುಂಬವೊಂದರ ಗೃಹ ಪ್ರವೇಶದ ಸಂಭ್ರಮವನ್ನೇ ಕಸಿದಿದೆ. ಆ ಪ್ರದೇಶದ ರಸ್ತೆಯಲ್ಲಿ ಆರಡಿಯಷ್ಟು ಮಳೆ ನೀರು ತುಂಬಿಕೊಂಡಿತ್ತು. ಮನೆಯ ಆವರಣಕ್ಕೂ ನೀರು ನುಗ್ಗಿತ್ತು. ಮಳೆಯ ಅಬ್ಬರಕ್ಕೆ ಪೆಂಡಾಲ್ ಸಂಪೂರ್ಣ ಹಾಳಾಯಿತು. ಗೃಹ ಪ್ರವೇಶಕ್ಕೆ ಬಂದ ಅತಿಥಿಗಳಾಗಿ ಸಿದ್ಧಪಡಿಸಿದ್ದ ಅಡುಗೆ ಕೂಡ ನೀರು ಪಾಲಾಯಿತು.
ಯಶವಂತಪುರ ಸರ್ಕಲ್ ಬಳಿ ಭಾರಿ ಗಾತ್ರದ ಮರ ಬಿದ್ದಿದೆ. ವಾಹನಗಳ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಮಹಾಲಕ್ಷ್ಮಿ ಲೇಔಟ್ ರಾಜೇಂದ್ರ ಟೆಕ್ಸ್‌ಟೈಲ್ಸ್ ಸ್ಲಂ ಮನೆಗಳಿಗೆ ನೀರು ನುಗ್ಗಿದೆ. 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ನಿವಾಸಿಗಳು ಮನೆಯಿಂದ ನೀರು ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ | Rain in Bangalore | ರಾಜಧಾನಿಯಲ್ಲಿ ಮಳೆ ಆರ್ಭಟ, ರಸ್ತೆಯಲ್ಲಿ ಜನ ಪರದಾಟ
ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ಮಳೆಯಿಂದಾಗಿ ಬೃಹತ್ ಮರದ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಫುಟ್ ಪಾತ್‌ಗೆ ಅಳವಡಿಸಲಾಗಿದ್ದ ವಿಭಜಕಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಂತರ ಬಿಬಿಎಂಪಿ ಸಿಬ್ಬಂದಿ ಮರದ ರೆಂಬೆ ತೆರವುಗೊಳಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನಲ್ಲಿಯೂ ಮಳೆಯಾಗಿದ್ದು, ಮನೆಗೆ ನೀರು ನುಗ್ಗಿದೆ. ಪ್ರತಿ ಬಾರಿ ಮಳೆ ಬಂದಾಗ ಇದೇ ಅವಾಂತರ ಸೃಷ್ಟಿಯಾಗುತ್ತಿದ್ದು ಎಂದು ಪಾಲಿಕೆ ವಿರುದ್ಧ ಅಲ್ಲಿನ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಸ್ಥಳೀಯ ನಿವಾಸಿ ಲಾವಣ್ಯ ಮಾತನಾಡಿ ʻʻಮನೆಗೆ ನಾಲ್ಕೈದು ಅಡಿ ನೀರು ಬಂದಿತ್ತು. ರಾತ್ರಿ ಮೂರು ಗಂಟೆವರೆಗೂ ಮನೆ ಕ್ಲೀನ್ ಮಾಡಿದ್ದೇವೆ. ಮಕ್ಕಳು ಮಲಗಿಲ್ಲ. ಮನೆಯಲ್ಲಿ ಇದ್ದ ಆಹಾರ ಪದಾರ್ಥಗಳು ಹಾಳಾಗಿವೆʼʼ ಎಂದು ಅಳಲು ತೋಡಿಕೊಂಡರು.
ರಾಜ್ಯದಲ್ಲಿ ಇನ್ನೂ ಐದು ದಿನ ಮಳೆಯಾಗಲಿದ್ದು, ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿಂಗಸಂದ್ರದಲ್ಲಿ 40 ಮಿ.ಮೀ, ಗೊಟ್ಟಿಗೆರೆ 43 ಮಿ.ಮೀ, ಅಂಜನಾಪುರ 32.5 ಮಿ.ಮೀ, ಹೆಮ್ಮಿಗಪುರ 18.5 ಮಿ.ಮೀ, ಬೇಗೂರು 44 ಮಿ.ಮೀ, ವಿದ್ಯಾಪೀಠ ಮಿ.ಮೀ, ಸಾರಕ್ಕಿ 38 ಮಿ.ಮೀ, ಬಿಳೆಕಳ್ಳಿ 40 ಮಿ.ಮೀ, ಅರಕೆರೆಯಲ್ಲಿ 40ಮಿ.ಮೀ ಮಳೆಯಾಗಿದೆ.
ಚಾಮರಾಜಪೇಟೆ, ವಿದ್ಯಾಪೀಠ, ಮಲ್ಲೇಶ್ವರಂ, ಯಶವಂತಪುರ, ಯಲಹಂಕ, ನಾಗರಬಾವಿ, ಕೆ ಆರ್ ಪುರಂ, ಜ್ಞಾನಭಾರತಿ, ವರ್ತೂರು, ಬೆಳ್ಳಂದೂರು, ವಿದ್ಯಾರಣ್ಯಪುರ, ನಾಗಪುರ, ಹಂಪಿನಗರ, ಆರ್ ಆರ್ ನಗರ, ಕೊನೇನ ಅಗ್ರಹಾರದಲ್ಲಿ ಸಾಧಾರಣ ಮಳೆ ಆಗಿದೆ.
ಇದನ್ನೂ ಓದಿ |Rain News | ಪ್ರವಾಹ, ಚುನಾವಣೆ ಬಂದಾಗ ನೆನಪಾಗುತ್ತೇವೆ; ಯಾದಗಿರಿ ನೆರೆಪೀಡಿತ ಗ್ರಾಮದವರ ಆಕ್ರೋಶ