ಬೀದರ್: ರಾಜ್ಯದ ಸುಮಾರು 10ಕ್ಕಿಂತಲೂ ಅಧಿಕ ಜಿಲ್ಲೆಗಳಲ್ಲಿ ಮಳೆಯಿಂದಾಗಿ (Rain News) ಜನಜೀವನ ಅತಂತ್ರವಾಗಿದೆ. ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ (Heavy rain) ಹೆಚ್ಚಾಗಿದ್ದರೆ, ಬೆಳಗಾವಿಯಲ್ಲಿ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರು ಅಪಾಯವನ್ನು ಸೃಷ್ಟಿಸಿದೆ. ಇತ್ತ ಕಲಬುರಗಿ, ಬೀದರ್‌ನಲ್ಲಿ (Bidar News) ಕೂಡಾ ಮಳೆಯಿಂದಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಬೀದರ್‌ನಲ್ಲಿ ಸುರಿಯುತ್ತಿರುವ ಮಳೆಗೆ ಯುವಕನೊಬ್ಬ ನೀರುಪಾಲಾಗಿದ್ದಾನೆ (Young Man death).
ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ನಡೆದ ಉಕ್ಕಿ ಹರಿಯುತ್ತಿರುವ ನೀರಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನೊಬ್ಬ ಮೃತಪಟ್ಟಿದ್ದಾರೆ. ಮಲ್ಲಪ್ಪ ಶರಣಪ್ಪ ಕರೆಪನೋರ್ (25) ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ.
ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಿಂದ ಮರುಳುವಾಗ ದುರ್ಘಟನೆ ಸಂಭವಿಸಿದೆ. ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಳ್ಳದಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಆದರೆ, ದಾಟಬಹುದು ಎಂಬ ಧೈರ್ಯದಲ್ಲಿ ಆತ ಮುಂದಡಿ ಇಟ್ಟಿದ್ದ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸೋಮವಾರ ರಾಜ್ಯದಲ್ಲಿ ಸಂಭವಿಸಿತ್ತು ನಾಲ್ಕು ಮಳೆ ಸಾವು
- ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಕೈಕಾಲು ತೊಳೆಯಲು ಹೋದ ಮಂಜುನಾಥ ಬಸವರಾಜ ಆನಂದಿ (27) ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
- ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದಿದ್ದರಿಂದ ಬಸಮ್ಮ (40) ಎಂಬ ಮಹಿಳೆ ಮೃತಪಟ್ಟಿದ್ದಾರೆ.
- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥದಲ್ಲಿ ಈಜಲು ಹೋದ ಪ್ರಥಮ ಪಿಯುಸಿ ವಿದ್ಯಾರ್ಥಿ ಮಣಿಕಂಠ ಮಂಜುನಾಥ ನಾಯ್ಕ (17) ನೀರಿನಲ್ಲಿ ಮುಳುಗಿ ಮೃಪಟ್ಟಿದ್ದಾನೆ. ಈತ ಹೊನ್ನಾವರದ ರಾಯಲಕೇರಿ ನಿವಾಸಿ.
- ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟಿದ್ದ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದ.
ಇದನ್ನೂ ಓದಿ : Rain News : ಭಾರಿ ಮಳೆಗೆ ಕುಸಿದ ಮನೆ, ಒಳಗಿದ್ದ ಆರು ಮಂದಿ ಪವಾಡಸದೃಶ ಪಾರು