ಬೆಂಗಳೂರು: ಕಳೆದ ೨೪ ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ (Rain News) ಒಟ್ಟು ೧೧ ಮಂದಿ ಬಲಿಯಾಗಿದ್ದಾರೆ. ಅಪಾರ ಆಸ್ತಿ ಪಾಸ್ತಿಗೆ ನಷ್ಟವಾಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ.
ಹತ್ತಾರು ಮನೆಗಳು ಕುಸಿತಕ್ಕೊಳಗಾಗಿವೆ ಹಾಗೂ ನೂರಾರು ಮನೆಗಳು ಭಾಗಶಃ ಹಾನಿಗೊಂಡಿವೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಅಪಾರ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಆಗಿರುವ ಹಾನಿಯನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ರಾಜ್ಯದ ಕೆಲವೆಡೆ ಇದ್ದಕ್ಕಿದ್ದ ಹಾಗೆಯೇ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಹಾಸನ, ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ನದಿಗಳು-ಹಳ್ಳಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ರಸ್ತೆ, ಸೇತುವೆಗಳು ಮುಳುಗಡೆಯಾಗಿರುವುದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ಈ ಹಿಂದಿನಂತೆಯೇ ಗುಡ್ಡಗಳು ಕುಸಿದೇ ಅಪಾರ ಹಾನಿ ಸಂಭವಿಸಿದೆ.
ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ
ಅತಿ ಹೆಚ್ಚು ಮಳೆ ಸುರಿಯುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಮಳೆಯಿಂದ ಆಗಿರುವ ಹಾನಿ, ನಷ್ಟ ಪರಿಹಾರ, ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಗತ್ಯ ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಭಾಗಿಯಾಗಿದ್ದರು.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಾಣ ಹಾನಿ?
ಉತ್ತರ ಕನ್ನಡ: ಧರೆ ಕುಸಿದು ನಾಲ್ವರು ಸಾವು
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಮನೆಯೊಂದರ ಮೇಲೆ ಧರೆ ಕುಸಿದು ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಒಂದೇ ಕುಟುಂಬದ ಮೂವರು ಹಾಗೂ ಓರ್ವ ಸಂಬಂಧಿ ಯುವಕ ಸೇರಿ ನಾಲ್ವರು ಮನೆಯಲ್ಲಿ ಮಲಗಿದ್ದ ವೇಳೆಯೇ ಮಣ್ಣು ಕುಸಿದು ಮನೆ ಉರುಳಿದ ಪರಿಣಾಮ ಸಾವನ್ನಪ್ಪಿದ್ದಾರೆ. ಮೃತರನ್ನು ಮನೆಯೊಡತಿ ಲಕ್ಷ್ಮೀ ನಾಯ್ಕ(48), ಅವರ ಪುತ್ರಿ ಲಕ್ಷ್ಮೀ ನಾಯ್ಕ(33), ಪುತ್ರ ಅನಂತ ನಾಯ್ಕ(32) ಹಾಗೂ ಸಹೋದರಿಯ ಮಗ ಪ್ರವೀಣ್ ನಾಯ್ಕ(20) ಎಂದು ಗುರುತಿಸಲಾಗಿದೆ.
ಮಂಗಳೂರು: ಗುಡ್ಡ ಕುಸಿದು ಇಬ್ಬರು ಮಕ್ಕಳ ಸಾವು
ಜಿಲ್ಲೆಯ ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಭಾರಿಮಳೆಗೆ ಮನೆ ಮೇಲೆ ಗುಡ್ಡಕುಸಿದು ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಕುಸುಮಧಾರ ಮತ್ತು ರೂಪಾಶ್ರೀ ದಂಪತಿಗಳ ಇಬ್ಬರು ಹೆಣ್ಣು ಮಕ್ಕಳಾದ ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಶೃತಿ(11) ಮತ್ತು ಒಂದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಜ್ಞಾನ ಶ್ರೀ(6) ಮಣ್ಣಿನಡಿ ಸಿಲುಕಿದ್ದರು
ಬಳ್ಳಾರಿಯಲ್ಲಿ ಒಬ್ಬರ ಸಾವು; ಹಲವರ ರಕ್ಷಣೆ
ಕೆಲಸ ಮುಗಿಸಿಕೊಂಡು ಸ್ವ ಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಬೈಕ್ ಮೂಲಕ ದಾಟುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಕೊಂಡ ಹೋದ ಘಟನೆ ಸಂಡೂರಿನಲ್ಲಿ ನಡೆದಿದೆ. ಬೊಮ್ಮಘಟ್ಟ ಗ್ರಾಮದ ನಿವಾಸಿ ಕೃಷ್ಣ ಕುಮಾರ(51) ಮೃತ ವ್ಯಕ್ತಿ. ಸಂಡೂರು ತಾಲೂಕಿನ ಸ್ಮಯೋರ್ ಕಂಪನಿಯ ಉದ್ಯೋಗಿಯಾಗಿದ್ದರು. ಎಂದಿನಂತೆ ಕೆಲಸ ಮುಗಿಸಿಕೊಂಡು ಮರಳಿ ಸ್ವಗ್ರಾಮ ಬೊಮ್ಮಘಟ್ಟಕ್ಕೆ ಹೋಗುವಾಗ ಅಂಕಮನಾಳ್ ಗ್ರಾಮದ ಹಳ್ಳದ ಸೇತುವೆಯನ್ನು ದಾಟುವ ಸಂದರ್ಭದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.
24 ಜನರ ರಕ್ಷಣೆ: ಬಳ್ಳಾರಿ ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಹೂ ಕೀಳಲು ತೋಟಕ್ಕೆ ಹೋಗಿ ವೇದಾವತಿ ನೀರಲ್ಲಿ ಸಿಲುಕುವ ಭೀತಿಯಲ್ಲಿದ್ದ 24 ಜನ ಕೂಲಿ ಕಾರ್ಮಿಕರನ್ನು ಫೈಯರ್ ಬ್ರಿಗೇಡ್ ತಂಡ ಮತ್ತು ಪೊಲೀಸರು ರಕ್ಷಣೆ ಮಾಡಿದ್ದಾರೆ.
ತುಮಕೂರು: ನೀರಿನಲ್ಲಿ ಕೊಚ್ಚಿ ಹೋದ ಶಿಕ್ಷಕ
ಸೋಮವಾರ ರಾತ್ರಿ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಹಳ್ಳ ದಾಟಲು ಹೋಗಿ ಶಾಲಾ ಶಿಕ್ಷಕನೋರ್ವ
ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ಚನ್ನನಕುಂಟೆ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ಆರೀಫ್ ಉಲ್ಲಾ (೫೫) ಮೃತ ದುರ್ದೈವಿ. ಶಿರಾ ನಗರದ ದಾವತ್ ಪಾಳ್ಯ ನಿವಾಸಿಯಾಗಿರೋ
ಆರಿಪ್ ಕೆಲಸ ಮುಗಿಸಿಕೊಂಡು ವಾಪಸ್ ಶಿರಾ ನಗರಕ್ಕೆ ಬರುತ್ತಿರುವಾಗ ರಸ್ತೆಯಲ್ಲಿರುವ ಹಳ್ಳ ದಾಟುವ ಸಮಯದಲ್ಲಿ ತಮ್ಮ ವಾಹನ ಆಯತಪ್ಪಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಶಿರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೈಸೂರು: ಇಬ್ಬರು ವೃದ್ಧೆಯರ ಸಾವು
ಮೈಸೂರಿನ ಹುಣಸೂರಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆ ಗೋಡೆ ಕುಸಿದು ಶಾಂತಮ್ಮ (65) ಎಂಬ ವೃದ್ಧೆ ಮೃತಪಟ್ಟಿದ್ದರೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಬಳಿಯ ಕಾಲುವೆಯಲ್ಲಿ ಅಂದಾಜು 6೦ ವರ್ಷದ ಅನಾಮಧೇಯ ವೃದ್ಧೆಯ ಶವವೊಂದು ಪತ್ತೆಯಾಗಿದೆ. ಹುಣಸೂರಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಅದರೊಳಗಿದ್ದ ಶಾಂತಮ್ಮ ಎಂಬುವರು ಮೃತಪಟ್ಟಿದ್ದಾರೆ. ಇನ್ನು ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಬಳಿಯ ಕಾಲುವೆಯಲ್ಲಿ ಸುಮಾರು 6೦ ವರ್ಷ ಆಸುಪಾಸಿನ ವೃದ್ಧೆಯೊಬ್ಬರ ಶವವೊಂದು ತೇಲಿಬಂದಿದೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಾಲು ಜಾರಿ ಕಾಲುವೆಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.
ವಿಜಯನಗರ: ನೀರಿನಲ್ಲಿ ಕೊಚ್ಚಿಹೋದ ರೈತ
ಹೊಸಪೇಟೆ ತಾಲೂಕಿನ ಗರಗ ನಾಗಲಾಪುರದಲ್ಲಿ ನೋಡ ನೋಡುತ್ತಿದ್ದಂತೆ ರೈತನೊಬ್ಬ ನೀರಲ್ಲಿ ಕೊಚ್ಚಿ ಹೋದ ದುರಂತ ಘಟನೆ ನಡೆದಿದೆ. ಉಂಚೋಟಿ ಬೊಮ್ಮಪ್ಪ (55) ಎಂಬ ರೈತ ಕೊಚ್ಚಿಹೋಗಿದ್ದಾರೆ. ಹೊಲದಲ್ಲಿ ಆಗಿರುವ ಬೆಳೆ ಹಾನಿಯನ್ನು ವೀಕ್ಷಿಸುವ ಸಂಬಂಧ ಅವರು ಹೊರಟಿದ್ದರು ಎನ್ನಲಾಗಿದೆ. ಈ ವೇಳೆ ಉಕ್ಕಿ ಹರಿಯುತ್ತಿದ್ದ ನೀರಿಗೆ ಕೊಚ್ಚಿ ಹೋಗಿದ್ದಾರೆ.
ಇದನ್ನೂ ಓದಿ| Rain news | ಜಲಾವೃತಗೊಂಡಿದ್ದ ರಸ್ತೆ ಮಧ್ಯೆ ಸಿಲುಕಿದ ಶ್ರಮಿಕ ಸಂಜೀವಿನಿ ವಾಹನ