ಬೆಂಗಳೂರು: ರಾಜ್ಯಾದ್ಯಂತ ಶನಿವಾರವೂ ಧಾರಾಕಾರವಾಗಿ ಮಳೆ ಸುರಿದಿದ್ದು (Rain News), ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದಿಂದ ಆಗಿರುವ ಅನಾಹುತಗಳು ಲೆಕ್ಕಕ್ಕೇ ಸಿಗುತ್ತಿಲ್ಲ. ಈ ನಡುವೆ ಭಾನುವಾರ ಕೂಡ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ತಡೆಗೋಡೆ ಕುಸಿತದ ಭೀತಿ
ಕೊಡಗಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಕೆಳಭಾಗದ ತಡೆಗೋಡೆ ಕುಸಿಯುವ ಭೀತಿ ಎದುರಾಗಿದ್ದು, ಮಡಿಕೇರಿ ತಿಮ್ಮಯ್ಯ ವೃತ್ತದಲ್ಲಿ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಗೋಡೆ ಕುಸಿತವಾದಲ್ಲಿ ಭಾರಿ ಅನಾಹುತ ಸಾಧ್ಯತೆ ಇದ್ದು,
ಈಗಾಗಲೆ ತಡೆಗೋಡೆಯ ಒಂದೇರಡು ಬ್ರೀಕ್ಸ್ ನಲ್ಲಿ ಏರಿಳಿತ ಕಂಡು ಬಂದಿದೆ.
ಬೆಳಗಾವಿಯಲ್ಲಿ ಮುಳುಗಿದ ಸೇರುವೆ
ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಮೂಡಲಗಿ ತಾಲೂಕಿನಲ್ಲಿ ನಾಲ್ಕು ಸೇತುವೆಗಳು ಮುಳುಗಿವೆ. ಮಾರ್ಕಂಡೇಯ ನದಿ ತೀರದ ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ನಡುವೆರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿರುವುದರಿಂದ ಭಾನುವಾರ ಸಂಜೆ ನೀರು ಹೊರಬಿಡುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಷ್ಟೊಂದು ಮಳೆಯಾಗಿರಲಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಯಾದಗಿರಿಯಲ್ಲಿ ದೇಗುಲ ಜಲಾವೃತ
ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಗುರುಮಿಠಕಲ್ ತಾಲೂಕಿನ ಚಿಂತನಹಳ್ಳಿ ಸಮೀಪದ ಗವಿಸಿದ್ದೇಶ್ವರ ದೇಗುಲ ಜಲಾವೃತಗೊಂಡಿದೆ. ಬೆಟ್ಟದ ಕೆಳಭಾಗದಲ್ಲಿರುವ ದೇವಾಲಯ ಇದಾಗಿದ್ದು, ಬೆಟ್ಟದ ಗುಹೆಯೊಳಗೆ ಗರ್ಭ ಗುಡಿ ಇದೆ. ಮುಳುಗಡೆ ಹಿನ್ನೆಲೆಯಲ್ಲಿ ದೇವರ ದರ್ಶನ ನಿಷೇಧಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ತಗ್ಗಿದ ಮಳೆ
ಉತ್ತರಕನ್ನಡದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಪ್ರವಾಹ ಪರಿಸ್ಥಿತಿ ಹೀಗೆಯೇ ಮುಂದುವರಿದಿದೆ. ಜಿಲ್ಲೆಯ ಕುಮಟಾ, ಹೊನ್ನಾವರ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಶಿರಸಿ-ಸಿದ್ದಾಪುರದಲ್ಲಿ ವ್ಯಾಪಕ ಮಳೆಯಿಂದ ಕುಮಟಾ, ಹೊನ್ನಾವರ ಭಾಗದಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಕುಮಟಾ ತಾಲೂಕಿ ಕೊನ್ನಳ್ಳಿ, ಊರಕೇರಿ, ಮೂರೂರು ಗ್ರಾಮದಲ್ಲಿ ಮನೆಗಳಿಗೆ ಪ್ರವಾಹ ಬಂದಿದೆ.
ಕಾರವಾರದ ಜಿಲ್ಲಾ ಆಸ್ಪತ್ರೆಗೆ ನೀರು ನುಗ್ಗಿದ್ದು, ಗೋಡೆಗಳು ಕುಸಿಯುವ ಭೀತಿ ಎದುರಾಗಿದೆ. ಕುಮಟಾ-ಹೊನ್ನಾವರದಲ್ಲಿ ಬೀಡುಬಿಟ್ಟಿರುವ ಎಸ್‌ಡಿಆರ್‌ಎಫ್ ರಕ್ಷಣಾ ತಂಡ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದೆ.
ರಾಯಚೂರಿನಲ್ಲಿ ಸೇತುವೆ ಮುಳುಗಡೆ
ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವುದರಿಂದ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಶೀಲಹಳ್ಳಿ ಸೇತುವೆ ಮುಳುಗಡೆಯಿಂದ ಹಂಚಿನಾಳ,ಕಡದರಗಡ್ಡಿ, ವಕ್ಕಂಗಡ್ಡಿ, ಮ್ಯಾದರಗಡ್ಡಿ, ಯರಗೋಡಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಯಾರೂ ಸಂಚರಿಸಿದಂತೆ ನೋಡಿಕೊಳ್ಳಲಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಹಂಪಿ ದೇಗುಲ ಜಲಾವೃತ
ತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಒಂದೂವರೇ ಲಕ್ಷ ಕ್ಯೂಸೆಕ್ಸ್‌ಗೂ ಅಧಿಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಹಂಪಿಯ ದೇಗುಲಗಳಿಗೆ ನೀರು ನುಗ್ಗಿದೆ. ವಿಶ್ವ ವಿಖ್ಯಾತ ಹಂಪಿಯ 5 ದೇವಾಲಯಗಳಿಗೆ ಹೋಗುವ ದಾರಿ ಬಂದ್ ಆಗಿದ್ದು, ಕೊದಂಡರಾಮ ದೇಗುಲದ ಅರಳಿ ಕಟ್ಟೆ ಸಂಪೂರ್ಣ ಜಲಾವೃತವಾಗಿದೆ. ಕೊದಂಡರಾಮ ದೇಗುಲ, ಯಂತ್ರೋಧ್ದಾರಕ, ವೆಂಕಟೇಶ್ವರ ದೇಗುಲ, ಸೂರ್ಯನಾರಾಯಣ, ರಂಗನಾಥ ಸ್ವಾಮಿ ದೇಗುಲಕ್ಕೆ ಹೋಗುವ ದಾರಿ ಬಂದ್ ಆಗಿದೆ. ನದಿ ಭೋರ್ಗರೆತ ಹೆಚ್ಚಾಗಿ ಸಾಲು ಮಂಟಪಗಳಿಗೂ ನೀರು ನುಗ್ಗಿದ್ದು, ನದಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಹಂಪಿಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಗದಗದ ಮದಲಗಟ್ಟಿ ಆಂಜನೇಯ ದೇಗುಲಕ್ಕೆ ನೀರು
ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮದಲಗಟ್ಟಿ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗಿದೆ. ಬಳ್ಳಾರಿ ಗದಗ ಗಡಿ ಅಂಚಿನಲ್ಲಿರುವ ಈ ದೇಗುಲ ಜಲಾವೃತವಾಗಿದೆ. ಆದರೂ ಭಕ್ತರು ನೀರಿನಲ್ಲೇ ಹೋಗಿ ದರ್ಶನ ಪಡೆಯುತ್ತಿದ್ದಾರೆ. ತುಂಗಭದ್ರಾ ಆರ್ಭಟದಿಂದ ನದಿ ತಟದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಮುಂಡರಗಿ ತಾಲೂಕಿನ ವಿಠ್ಠಲಾಪೂರ, ಬಿದರಳ್ಳಿ,ಗುಮ್ಮಗೋಳ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ|Weather Report | ಬೆಳಗಾವಿ, ಹಾಸನ ಸೇರಿ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುನ್ಸೂಚನೆ