ಶಿವಮೊಗ್ಗ/ಹಾಸನ: ಶಿವಮೊಗ್ಗದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದು, (Rain News) ದಿಢೀರ್ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಲ್ಲದೆ ಬಿಸಿಲ ಧಗೆಯಿಂದ ತತ್ತರಿಸಿದ ಜನತೆಗೆ ಮಳೆ ತಂಪೆರೆದಿದೆ.
ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತಗೊಂಡಿದ್ದವು. ಕೆಲವೆಡೆ ಮಳೆ ನೀರಿಗೆ ಬೈಕ್‌ಗಳು ಕೊಚ್ಚಿ ಹೋದರೆ, ಕಾರುಗಳು ಮುಳುಗಡೆ ಆಗಿದ್ದವು. ಕಣ್ಣೇದರೇ ಬೈಕ್‌ಗಳು ಮುಳುಗಿ ಹೋಗುತ್ತಿದ್ದರೆ ಸವಾರರು ಕಂಗಾಲಾಗಿದ್ದರು.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಧಾರಾಕಾರವಾಗಿ ಸುರಿದ ಮಳೆಗೆ ಕೆಲವು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರ ಸಂಚಾರಕ್ಕೆ ಅಡ್ಡಿಯುಂಟಾಯಿತು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಹೊರಗೆ ಹಾಕುವುದೇ ಕಾಯಕವಾಗಿತ್ತು. ಕೆಲವು ಅಂಗಡಿಗಳಿಗೂ ನೀರು ನುಗ್ಗಿದ್ದರಿಂದ ದಿನಸಿ ಸಾಮಾನು ನೀರುಪಾಲಾಯಿತು.
ಮಳೆ ಬಂದ ಖುಷಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ದಿಢೀರ್ ಮಳೆಗೆ ಬೈಕ್ ಸವಾರರು ಬಸ್ ನಿಲ್ದಾಣದ ಆಶ್ರಯ ಪಡೆದುಕೊಂಡರೆ, ಇತ್ತ ಕಾಲೇಜು ವಿದ್ಯಾರ್ಥಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದರು.
ಹಾಸನದಲ್ಲೂ ಗುಡುಗಿದ ವರುಣ
ಹಾಸನದ ವಿವಿಧೆಡೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ವರುಣ ತಂಪೆರದಿದ್ದಾನೆ. ಹಾಸನ, ಬೇಲೂರು, ಅರಕಲಗೂಡು, ಚನ್ನರಾಯಪಟ್ಟಣ ಸೇರಿದಂತೆ ಹಲವೆಡೆ ವರ್ಷಧಾರೆ ಆಗಿದೆ. ಮತ್ತೊಂದು ಭಾರಿ ಮಳೆಗೆ ಬೈಕ್‌ಗಳೆಲ್ಲವೂ ನೀರಲ್ಲಿ ಮುಳುಗಡೆಯಾಗಿತ್ತು.
ಇದನ್ನೂ ಓದಿ: Rain news: ಬೆಂಗಳೂರಲ್ಲಿ ಆವರಿಸಿದ ಕಗ್ಗತ್ತಲು; ಭಾರಿ ಮಳೆಗೆ ಹೈರಾಣಾದ ಸಾರ್ವಜನಿಕರು
ಸಕ್ಕರೆ ನಗರಿ ಮಂಡ್ಯದಲ್ಲೂ ಮಳೆಯ ಸಿಂಚನ
ಮಂಡ್ಯದಲ್ಲೂ ಮಂಗಳವಾರ ಕಳೆದ ಅರ್ಧ ಗಂಟೆಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಜನರು ಮರಗಳು, ಬಸ್ ಸ್ಟ್ಯಾಂಡ್ ಆಶ್ರಯ ಪಡೆದುಕೊಂಡರು. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿದ್ದ ಕಾಂಗ್ರೆಸ್ ನಾಯಕರ ಪ್ರತಿಭಟನೆಗೂ ಮಳೆ ಅಡ್ಡಿಯಾಯಿತು. ದಿಢೀರ್ ಮಳೆಗೆ ತಲೆ ಮೇಲೆ ಕುರ್ಚಿ, ಫ್ಲಾಗ್, ಬ್ಯಾನರ್‌ನ ರಕ್ಷಣೆ ಪಡೆದರು. ಇತ್ತ ಚಿಕ್ಕಮಗಳೂರು ನಗರ, ಸಖರಾಯಪಟ್ಟಣ, ಉದ್ದೇಬೋರಹಳ್ಳಿಯಲ್ಲೂ ಭಾರಿ ಮಳೆಗೆ ಜನರು ತತ್ತರಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ