ಮುಲ್ಕಿ (ದಕ್ಷಿಣ ಕನ್ನಡ): ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ (Heavy rain) ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೊನಿಯ ಶ್ರೀ ಮಲ್ಲಿಕಾರ್ಜುನ ಮಠದ ಬಳಿಯ ನಿವಾಸಿ ಲಕ್ಷ್ಮಿ ಪಕೀರಪ್ಪ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದು (House collapsed) ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ರಾತ್ರಿ ಹೊತ್ತು ಮಳೆ ಸುರಿದಿದ್ದು ಮನೆಯ ಮೇಲ್ಭಾಗದಲ್ಲಿ ಬಾರಿ ಶಬ್ದ ಉಂಟಾಗಿದೆ. ಈ ಸಂದರ್ಭ ಮನೆಯೊಳಗಿದ್ದ
ಲಕ್ಷ್ಮಿ ಪಕೀರಪ್ಪ ಸಹಿತ ಆರು ಮಂದಿ ಹೊರಗೆ ಓಡಿ ಬಂದ ಕ್ಷಣಾರ್ಧದಲ್ಲಿ ಮನೆ ಪೂರಾ ಕುಸಿದು ಬಿದ್ದಿದ್ದು ಮನೆಯವರು ಪವಾಡ ಸದೃಶ ಪಾರಾಗಿದ್ದಾರೆ. ಘಟನೆಯಿಂದ ಮನೆಯೊಳಗಿನ ವಸ್ತುಗಳು ಹಾಗೂ ಮನೆಗೆ ಹಾನಿಯಾಗಿದ್ದು ಬಾರಿ ನಷ್ಟ ಉಂಟಾಗಿದೆ ಎಂದು ಲಕ್ಷ್ಮಿ ಪಕೀರಪ್ಪ ತಿಳಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಕ್ಷಿಕೆರೆ, ಹಳೆಯಂಗಡಿ, ಅತಿಕಾರಿ ಬೆಟ್ಟು, ಕೊಳಚಿ ಕಂಬಳ ಪರಿಸರದಲ್ಲಿ ಮಳೆಗೆ ಭಾರೀ ಹಾನಿಯಾಗಿದೆ.
ಸಂಜೆಯಾಗುತ್ತಲೇ ಮಳೆಯ ಅಬ್ಬರ ಕಡಿಮೆಯಾಗಿದ್ದು ಮೋಡಮುಸುಕಿನ ವಾತಾವರಣವಿದೆ.
ಹರಿಹರ ಪಲ್ಲತಡ್ಕದ ಗುಂಡಡ್ಕ ಸೇತುವೆ ಮುಳುಗಡೆ
ಕಡಬ (ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕದ ಬಳಿಯ ಗುಂಡಡ್ಕ ಸೇತುವೆ ಮುಳುಗಡೆ ಹಾಗೂ ರಸ್ತೆಗೆ ಬಂಡೆ ಬಿದ್ದು, ಬರೆ ಜರಿದು ರಸ್ತೆ ಸಂಚಾರವು ಸ್ಥಗಿತಗೊಂಡಿದೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಡಬ ಮತ್ತು ಸುಳ್ಯ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇಲ್ಲಿನ ದೇವರ ಗದ್ದೆ ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದಿದೆ, ದೇವರಗದ್ದೆ ಎಂಬಲ್ಲಿ ಬಂಡೆ ಬಿದ್ದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಕಳೆದೆರಡು ದಿನಗಳಿಂದ ಕಡಬ, ಸುಳ್ಯ ತಾಲೂಕಿನ ಹಲವು ಭಾಗದಲ್ಲಿ ಬಾರೀ ಮಳೆಯಾಗುತಿದ್ದು ಗುಂಡಡ್ಕ ಸೇತುವೆ ನೀರಿನಲ್ಲಿ ಮುಳುಗಿದ್ದು ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
ಇದರಿಂದಾಗಿ ಹರಿಹರ ಪಲ್ಲತಡ್ಕ – ಐನೆಕಿದು – ಮಲೆಯಾಳ ರಸ್ತೆ ಸಂಚಾರವು ಸ್ಥಗಿತವಾಗಿದೆ. ಜಿಲ್ಲೆಯಾದ್ಯಂತ ಮಳೆ ಮುಂದುವರೆಯಲಿದ್ದು ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಮುಂದುವರೆದರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Rain News: ಮಲೆನಾಡಿನಲ್ಲಿ ಮಳೆ ಅಬ್ಬರ; ಕುಶಾಲನಗರ, ಬೆಳಗಾವಿಯಲ್ಲಿ ಕಾಲನಿಗಳಿಗೆ ನುಗ್ಗಿದ ನೀರು