ದಕ್ಷಿಣ ಕನ್ನಡ /ಕೊಡಗು : ರಾಜ್ಯಾದ್ಯಂತ ಮುಂಗಾರು ಅಬ್ಬರ ದಿನೇದಿನೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ (ಜು.1) ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಂಪಾಜೆ ಗ್ರಾಮದಲ್ಲಿ ಅಲ್ಲಲ್ಲಿ ಧರೆ ಕುಸಿತ ಉಂಟಾಗಿದ್ದು, ಗೂನಡ್ಕ ದರ್ಖಾಸಿನ ಗಣೇಶ್ ಭಟ್ ಎಂಬುವರ ಮನೆಗೆ ಹಾನಿಯಾಗಿದೆ.
ಧರಣಿ ದಯಾನಂದ ಎಂಬುವರ ಮನೆ ಸಂಪೂರ್ಣ ಜಲಾವೃತಗೊಂಡಿದ್ದು, ಸುತ್ತಮುತ್ತಲ ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಪಾಜೆ ಜ್ಯೂನಿಯರ್ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರೆ ಕುಸಿತ ಉಂಟಾಗಿದೆ. ಪಯಸ್ವಿನಿ ನದಿ ಹಾಗೂ ಇತರ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಪೇರಡ್ಕ-ದರ್ಕಾಸ್ ಸಂಪರ್ಕಗಳು ಸಂಪೂರ್ಣ ಕಡಿತಗೊಂಡಿವೆ. ಅಲ್ಲಲ್ಲಿ ತೋಟಗಳಿಗೆ ನೀರು ನುಗ್ಗಿದ್ದು, ಅಬೂ ಸಾಲಿ, ಜಿ.ಜಿ. ಶಿವಾನಂದ, ಜಿ.ಜಿ. ಹಿಮಕರ, ಚಂದ್ರ ಎಂಬುವರ ತೋಟಗಳು ಜಲಾವೃತಗೊಂಡಿದ್ದು, ನಷ್ಟದ ಪ್ರಮಾಣ ತಿಳಿದುಬರಬೇಕಿದೆ.
ಇದನ್ನೂ ಓದಿ | Weather report | ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ನಿರೀಕ್ಷೆ
ಎಲ್ಲೆಲ್ಲಿ ಎಷ್ಟು ಮಳೆ?
ಶುಕ್ರವಾರ (ಜುಲೈ ೧) ರಾತ್ರಿಯಿಂದ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, 100 ಮಿ.ಮೀ. ಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಮಳೆ ಆಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶದ ಚೆಂಬುವಿನಲ್ಲಿ 192 ಮಿ.ಮೀ ಮಳೆಯಾಗಿದ್ದರೆ, ಬಾಳಿಲ 128 ಮಿ.ಮೀ, ವಾಲ್ತಾಜೆ ಕಂದ್ರಪಾಡಿ 127 ಮಿ.ಮೀ, ಕರಿಕಳ 106 ಮಿ.ಮೀ, ಮಡಪ್ಪಾಡಿ 124 ಮಿ.ಮೀ, ಬಳ್ಪ 116 ಮಿ.ಮೀ, ಮುರುಳ್ಯ 119 ಮಿ.ಮೀ, ಕೇನ್ಯ 116 ಮಿ.ಮೀ, ಮೆಟ್ಟಿನಡ್ಕ 127 ಮಿ.ಮೀ, ಹರಿಹರ ಮಲ್ಲಾರ 104 ಮಿ.ಮೀ, ಅಯ್ಯನಕಟ್ಟೆ 125 ಮಿ.ಮೀ. ಕಲ್ಮಡ್ಜ 121 ಮಿ.ಮೀ, ಸುಬ್ರಹ್ಮಣ್ಯ 105 ಮಿ.ಮೀ, ಎಣ್ಮೂರು 136 ಮಿ.ಮೀ. ಕಲ್ಲಾಜೆ 100 ಮಿ.ಮೀ, ಕಮಿಲ 100 ಮಿ.ಮೀ, ಕಾಸರಗೋಡಿನಲ್ಲಿ 156 ಮಿ.ಮೀ ಮಳೆಯಾಗಿದೆ.
ದಾಖಲೆಯ ಮಳೆ
ಇದು ದಾಖಲೆ ಪ್ರಮಾಣದ ಮಳೆಯಾಗಿದ್ದು, 2005 ರಲ್ಲಿ 106 ಮಿ.ಮೀ. ಮಳೆ ದಾಖಲಾಗಿತ್ತು. ಅಲ್ಲದೆ, ಲಭ್ಯ ಮಾಹಿತಿ ಪ್ರಕಾರ 47 ವರ್ಷದಲ್ಲಿ ಎರಡನೇ ಬಾರಿ ಧಾರಾಕಾರ ಮಳೆಯಾಗಿದೆ. ಸುಳ್ಯ ನಗರದಲ್ಲಿ 136 ಮಿ.ಮೀ. ಮಳೆಯಾಗಿದೆ ಎಂದು ಮಳೆ ದಾಖಲುಕಾರರಾದ ಎಂದು ಪಿ.ಜಿ.ಎಸ್.ಎನ್.ಪ್ರಸಾದ್ ಹಾಗೂ ಶ್ರೀಧರ್ ರಾವ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Rain Alert: ನಗರ ಸುತ್ತಿದ ಬಿಬಿಎಂಪಿ ಕಮೀಷನರ್, ರಸ್ತೆ, ಚರಂಡಿ ರಿಪೇರಿಗೆ ಸ್ಥಳದಲ್ಲೇ ಆರ್ಡರ್