ಬೆಂಗಳೂರು/ಮಂಗಳೂರು: ನೈರುತ್ಯ ಮುಂಗಾರು ಚುರುಕಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಂಗಳೂರು, ಕಾರವಾರದಲ್ಲಿ ವರುಣ (Rain News) ಅಬ್ಬರಿಸುತ್ತಿದ್ದಾನೆ. ಈ ಕಾರಣದಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ರಾಜ್ಯದಲ್ಲಿ ಇನ್ನೆರಡು ದಿನ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Report) ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಿಂದ ಹೆಚ್ಚಿನ ಮಳೆಯಾಗುತ್ತಿದೆ. ಇದೇ ಪರಿಸ್ಥಿತಿಯು ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯ ಐದು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜು.4ರಂದು ರಜೆಯನ್ನು ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಉಳಿದೆಡೆ ಮಳೆ ಪರಿಸ್ಥಿತಿ ನೋಡಿಕೊಂಡು ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ನೀಡಲಾಗಿದೆ.
ಭಾರಿ ಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಮರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಗಾಳಿ, ಮಳೆಗೆ ಮನೆ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಇಲ್ಲಿನ ಹೊನ್ನಾವರದ ಪ್ರಭಾತ ನಗರದಲ್ಲಿ ಪ್ರಕಾಶ್ ಮೇಸ್ತಾ ಎಂಬುವವರ ಮನೆ ಮೇಲೆ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯು ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇತ್ತ ಹೊನ್ನಾವರದ ಮಾಳ್ಕೋಡು ಗ್ರಾಮದ ಮಣಿಕಂಠ ನಾಯ್ಕ ಎಂಬವರ ಮನೆ ಮೇಲೂ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರುಪಾಲಾದ ಬೆಳೆಗಳು
ವಿಜಯನಗರ ಹೊಸಪೇಟೆಯ ಐತಿಹಾಸಿಕ ರಾಯರ ಕೆರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ನುಗ್ಗಿದೆ. ನಿನ್ನೆ ಸಾಯಂಕಾಲ (ಜು.3) ಸುರಿದ ಮಳೆಯಿಂದಾಗಿ ಬೆಳೆಗಳು ನೀರು ಪಾಲಾಗಿದೆ. ಹೊಸಪೇಟೆ ನಗರ ಸೇರಿದಂತೆ ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಈ ಜಿಲ್ಲೆಗಳಲ್ಲಿಂದು ಭಾರಿ ಮಳೆ ಅಲರ್ಟ್
ಜು.4ರಂದು ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಭಾಗವಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಅಬ್ಬರದ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕದಿಂದ ಲಘು ಮಳೆಯಾಗಲಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲಿನ ಮಳೆಯಾಗುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಡುಗು ಜತೆಗೆ ಕೆಲವು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Monkey death : ನೀರಿನ ಟ್ಯಾಂಕ್‌ಗೆ ಬಿದ್ದು ಮಂಗಗಳ ಸಾವು, ಸುದ್ದಿ ಕೇಳಿಯೇ ಹಲವರು ಅಸ್ವಸ್ಥ!
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 36 ಡಿ.ಸೆ – 24 ಡಿ.ಸೆ
ಗದಗ: 31 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ
ಬೆಳಗಾವಿ: 29 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 25 ಡಿ.ಸೆ
ಮಂಗಳೂರು: 29 ಡಿ.ಸೆ – 25 ಡಿ.ಸೆ
ಹೊನ್ನಾವರ: 29 ಡಿ.ಸೆ- 24 ಡಿ.ಸೆ
ಬೆಂಗಳೂರು ನಗರ: 30 ಡಿ.ಸೆ – 21 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ