Site icon Vistara News

Rain News | ಶಿವಮೊಗ್ಗದಲ್ಲಿ ಮಳೆ ಅಬ್ಬರ: ಆಗುಂಬೆ ಘಾಟ್‌ನಲ್ಲಿ ಗುಡ್ಡ ಕುಸಿತ, ಸಾಗರದಲ್ಲಿ ಸೀಳು ಬಿಟ್ಟ ಭೂಮಿ

Rain News

ಶಿವಮೊಗ್ಗ: ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಮಲೆನಾಡಿನಲ್ಲಿ ಸಹ ಅನಾಹುತಗಳ ಸರಣಿ ನಿಂತಿಲ್ಲ. ಎಡಬಿಡದೆ ಸುರಿಯುತ್ತಿರುವ ಮಳೆಗೆ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿದ್ದರೆ, ಸಾಗರದಲ್ಲಿ ಭೂಮಿ ಸೀಳುಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮಳೆ ಅಬ್ಬರ ಕಡಿಮೆಯಾಗುವ ಲಕ್ಷಣವೂ ಇಲ್ಲ ಎನ್ನಲಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಸಾಗರದ ನೆಹರು ನಗರದಲ್ಲಿ ಬುಧವಾರ (ಜು.೬) ಭೂಮಿ ಸೀಳು ಬಿಟ್ಟಿದ್ದು, ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ನೆಹರು ನಗರದ ಮೊದಲನೇ ಕ್ರಾಸ್‌ನಲ್ಲಿ ಭೂಮಿ ಸೀಳೊಡೆದಿದ್ದು, ಈ ವೇಳೆ ಭಾರಿ ಸ್ಪೋಟವಾದಂತೆ ಶಬ್ದವಾಗಿದೆ. ಇದರಿಂದ ಬೆಚ್ಚಿದ ಜನತೆ ಭಯಭೀತರಾಗಿ ಹೊರಗೆ ಬಂದು ನೋಡಿದಾಗ ರಸ್ತೆ ಸೀಳು ಬಿಟ್ಟಿರುವುದು ಗಮನಕ್ಕೆ ಬಂದಿದೆ.

ಸೀಳು ಬಿಟ್ಟ ನೆಲದಿಂದ ಒಮ್ಮೆಲೆ ಅಗಾದ ಪ್ರಮಾಣದಲ್ಲಿ ನೀರು ಉಕ್ಕಿದ್ದು, ಅಕ್ಕಪಕ್ಕ ಇರುವ ಮನೆಗಳಿಗೆ ನುಗ್ಗಿದೆ. ಏಕಾಏಕಿ ನಡೆದ ಈ ವಿಚಿತ್ರ ಸನ್ನಿವೇಶದಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಬಳಿಕ ವಿಷಯ ತಿಳಿದ ಸಾಗರ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Rain | ರಾಜ್ಯದಲ್ಲಿ ಹೈ ಅಲರ್ಟ್‌: ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಆಗುಂಬೆ ಘಾಟಿಯಲ್ಲೂ ಸಹ ಮಳೆಯ ಅವಾಂತರ ಮುಂದುವರಿಯುತ್ತಲೇ ಇದೆ. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಾಟಿಯಲ್ಲಿ ಗುಡ್ಡ ಕುಸಿದಿದೆ. ಸೂರ್ಯಸ್ತಮಾನ ವೀಕ್ಷಣಾ ಸ್ಥಳದ ಬಳಿ ಗುಡ್ಡ ಕುಸಿದಿದ್ದು, ಗುಡ್ಡದ ಮಣ್ಣು ರಸ್ತೆಗೆ ಬಿದ್ದಿದೆ. ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಕೊಂಚ ಅಡಚಣೆ ಆಗಿದೆ. ಘಾಟಿ ರಸ್ತೆಯ ನಾಲ್ಕನೇ ತಿರುವಿನಲ್ಲೂ ಗುಡ್ಡ ಕುಸಿದಿರುವ ಬಗ್ಗೆ ಎಂದು ವರದಿಯಾಗಿದೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಬಸ್‌ಗಳ ಮುಖಾಮುಖಿ ಡಿಕ್ಕಿಯಾಗಿ 40 ಮಂದಿಗೆ ಗಾಯ

Exit mobile version