ಬೆಂಗಳೂರು: ಕೊಡಗು, ಚಿಕ್ಕಮಗಳೂರು, ಕಾರವಾರ ಸೇರಿ ವಿವಿಧೆಡೆ ಮಂಗಳವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ (Rain News) ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಬೃಹತ್ ಮರಗಳು ರಸ್ತೆಗೆ ಉರುಳಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಇನ್ನು ಕಾರವಾರದಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಇನ್ನು ಐದು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಮೈಸೂರು ಮತ್ತು ಹಾವೇರಿ ಜಿಲ್ಲೆಯಲ್ಲಿ ಗಂಟೆಗೆ 50 kmph ವೇಗದ ಗಾಳಿ, ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಸಿಡಿಲು- ಗುಡುಗು ವೇಳೆ ಎಲೆಕ್ಟ್ರಿಕ್ ಉಪಕರಣಗಳನ್ನು ಆಫ್ ಮಾಡುವಂತೆ ಹಾಗೂ ಮಳೆ ಬರುವಾಗ ಶಿಥಿಲ ಕಟ್ಟಡ, ಮರದ ಕೆಳಗಡೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚನ ನೀಡಿದೆ.
ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ
ಕೊಡಗು: ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದ್ದು, ಪುಷ್ಪಗಿರಿ, ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರಿ ಮಳೆಯಿಂದನದಿ, ತೊರೆ, ಹಳ್ಳ, ಕೊಳ್ಳಗಳ ನೀರಿನ ಮಟ್ಟ ಏರಿಕೆಯಾಗಿದೆ. ಕಾವೇರಿ ನದಿ ನೀರಿನ ಮಟ್ಟವೂ ಗಣನೀಯ ಏರಿಕೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಇನ್ನು ಗಾಳಿ ಮಳೆಗೆ ಹಲವೆಡೆ ಮರ ಗಿಡಗಳು ನೆಲಕ್ಕುರುಳಿವೆ.
ಮಡಿಕೇರಿ ವ್ಯಾಪ್ತಿಯಲ್ಲಿ ರಾತ್ರಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ಮಡಿಕೇರಿ- ಚೆಟ್ಟಳ್ಳಿ ಮಾರ್ಗದಲ್ಲಿ ರಸ್ತೆಯ ಮೇಲೆ ಬೃಹತ್ ಮರ ಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಅಸ್ತವ್ಯವಾಗಿದೆ. ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಇಂದು (ಬುಧವಾರ) ಬೆಳಗ್ಗೆಯಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ, ಮಧ್ಯಾಹ್ನದ ಬಳಿಕ ಮತ್ತೆ ಆರ್ಭಟಿಸುತ್ತಿದ್ದಾನೆ. ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ. ಮಡಿಕೇರಿ, ಭಾಗಮಂಡಲ ನಾಪೋಕ್ಲು ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ.
ಮಲೆನಾಡಿನಲ್ಲಿ ಮಳೆ ಆರ್ಭಟ ಜೋರು
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಆರ್ಭಟ ಜೋರಾಗಿದೆ. ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಕಳಸ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಮರ ಅಡ್ಡಲಾಗಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳೀಯರಿಂದ ಮರ ತೆರವು ಕಾರ್ಯಚರಣೆ ನಡೆಯುತ್ತಿದೆ.
ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಮಲೆಮನೆ, ರಾಣಿಜರಿ, ಸುಂಕಸಾಲೆ, ದೇವರಮನೆ ಸುತ್ತಮುತ್ತ ಬಿರುಸಿನ ಮಳೆಯಾಗಿದೆ.
ಕಳೆದೊಂದು ವಾರದಿಂದ ಬಿಡುವು ನೀಡಿದ್ದ ವರುಣದೇವ, ಇಂದು ಬೆಳಗ್ಗೆಯಿಂದ ಮತ್ತೆ ಅಬ್ಬರಿಸುತ್ತಿದ್ದಾನೆ. ಭಾರಿ ಗಾಳಿ-ಮಳೆಗೆ ಚಾರ್ಮಾಡಿಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಕಾರವಾರದಲ್ಲಿ ಮನೆಗಳಿಗೆ ನುಗ್ಗಿದ ನೀರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ತಡರಾತ್ರಿ ಸುರಿದ ಭಾರಿ ಮಳೆಗೆ ಕಾರವಾರದಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಕಾರವಾರ ನಗರದ ಮಾಲಾದೇವಿ ಮೈದಾನ ಸಮೀಪ ಚರಂಡಿಯಲ್ಲಿ ನೀರು ಹರಿಯದ ಪರಿಣಾಮ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಮಲೆನಾಡು ಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಳೆಯಬ್ಬರ ಹೆಚ್ಚಿದ್ದು, ಕರಾವಳಿ ಭಾಗದ ಕಾರವಾರ, ಅಂಕೋಲಾ ಭಟ್ಕಳ, ಹೊನ್ನಾವರ ಭಾಗದಲ್ಲಿ ಅಲ್ಪ ಮಳೆಯಾಗಿದೆ. ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.
ಇದನ್ನೂ ಓದಿ | IND vs ENG Semi Final: ಇಂಡೋ-ಆಂಗ್ಲ ಸೆಮಿಫೈನಲ್ ಪಂದ್ಯದ ಸಂಭಾವ್ಯ ತಂಡ, ಪಿಚ್ ರಿಪೋರ್ಟ್ ಹೀಗಿದೆ
ಭಾರಿ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವು
ಮಂಗಳೂರು: ಭಾರಿ ಮಳೆಯ (Rain news) ಪರಿಣಾಮ ಮನೆಯ ಗೋಡೆ ಕುಸಿದು (Wall collapse) ಬಿದ್ದು ನಾಲ್ವರು ದುರ್ಮರಣ (four death) ಹೊಂದಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ (Ullala) ನಡೆದಿದೆ.
ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರ ಎಂಬಲ್ಲಿ ದುರ್ಘಟನೆ ನಡೆದಿದ್ದು, ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿದಿದೆ. ಇದು ಪಕ್ಕದ ಯಾಸಿರ್ ಎಂಬವರ ಮನೆಯ ಗೋಡೆಗೆ ಬಿದ್ದು ಭಾರೀ ಅವಘಡ ಸಂಭವಿಸಿತು. ಮನೆಯೊಳಗಿದ್ದ ಯಾಸಿರ್(45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಸಾವಿಗೀಡಾದರು.
ರಾತ್ರಿ ಸುರಿದ ಭಾರೀ ಮಳೆಗೆ ಈ ದುರಂತ ಸಂಭವಿಸಿದೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಲ್ವರ ಮೃತದೇಹವನ್ನೂ ಸ್ಥಳೀಯರು ಹೊರತೆಗೆದಿದ್ದಾರೆ.