Site icon Vistara News

Rain News | ಬಂಟ್ವಾಳ-ಬೆಳ್ತಂಗಡಿ ರಾ.ಹೆ. 73ರ ಹಲವೆಡೆ ಗುಡ್ಡ ಕುಸಿತ; ಚಾರ್ಮಾಡಿಯಲ್ಲಿ ಅಲರ್ಟ್‌

ಹೆದ್ದಾರಿ

ಮಂಗಳೂರು: ಭಾರಿ ಮಳೆ (Rain News) ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಹಲವೆಡೆ ಗುಡ್ಡ ಕುಸಿತವಾಗಿದೆ. ಬಂಟ್ವಾಳದ ಹಳೇಗೇಟು, ವಗ್ಗ ಬಳಿ ಗುಡ್ಡ ಕುಸಿತವಾಗಿದ್ದರಿಂದ ರಸ್ತೆಗೆ ಬಂಡೆ ಮತ್ತು ಮರಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಬ್ಯಾರಿಕೇಡ್ ಹಾಕಿ ಅರ್ಧ ರಸ್ತೆಯಲ್ಲಿ ಸಂಚಾರ ಮಾಡಲು ಅನುವು ಮಾಡಿಕೊಡಲಾಗಿದೆ. ಇನ್ನೊಂದೆಡೆ ಶಿರಾಡಿ ಘಾಟ್‌ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಅಲರ್ಟ್‌ ಆಗಿರಲಾಗಿದೆ.

ಶಿರಾಡಿ ಘಾಟ್‌ ಬಂದ್ ಆಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲೇ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಅದೇ ರೀತಿ ಸುಳ್ಯ ತಾಲೂಕಿನ ಗೂನಡ್ಕ ಬಳಿ ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತವಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದೊಡ್ಡ ಮರಗಳು ಇರುವ ಗುಡ್ಡ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ.

ಇದನ್ನೂ ಓದಿ | Rain News | ಮಳೆಯಿಂದ ಉಕ್ಕಿದ ನದಿ: ದಡದಲ್ಲೇ ಮಗುವಿನ ಜನನ

ಚಾರ್ಮಾಡಿ ಘಾಟ್‌ನಲ್ಲಿ ಅಲರ್ಟ್ : ಶಿರಾಡಿ ಘಾಟ್‌ ರಸ್ತೆ ಬಂದ್ ಬೆನ್ನಲ್ಲೇ ಜಿಲ್ಲಾಡಳಿತ ಅಲರ್ಟ್‌ ಆಗಿದ್ದು, ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ ಮಾರ್ಗದಲ್ಲಿ ಹೆದ್ದಾರಿ ಪಕ್ಕದ ಗಿಡಗಂಟಿ, ಮಣ್ಣು ಹಾಗೂ ಅಪಾಯಕಾರಿ ಕಲ್ಲುಗಳನ್ನು ಜೆಸಿಬಿ ಮೂಲಕ ತೆರವು ಮಾಡಲು ಕ್ರಮ ಕೈಗೊಂಡಿದೆ. ಚಾರ್ಮಾಡಿ ಘಾಟ್‌ನಲ್ಲಿ ವಾಹನದಟ್ಟನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಜೆಸಿಬಿ ಮೂಲಕ ಹೆದ್ದಾರಿ ಪಕ್ಕದ ಗಿಡಗಂಟಿ, ಮಣ್ಣು ತೆರವುಗೊಳಿಸಿ, ಗುಡ್ಡಗಳಿಂದ ಹರಿದು ಬರುತ್ತಿರುವ ನೀರಿನ ಹರಿವಿಗೆ ಸಮಸ್ಯೆಯಾಗದಂತೆ ಹೂಳು ತೆಗೆದು, ಘಾಟ್‌ ರಸ್ತೆಯ ಹಳ್ಳಗಳಲ್ಲಿ ನೀರು ನಿಲ್ಲದಂತೆ ಮಣ್ಣು ತೆರವು ಮಾಡುತ್ತಿದ್ದಾರೆ.

ಸಂಚಾರ ಅಪಾಯ: ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ರಸ್ತೆಯಲ್ಲಿ ಸಣ್ಣ ಬಿರುಕು ಮೂಡಿದೆ. ಭಾರಿ ಪ್ರಪಾತದ ಮೇಲ್ಭಾಗದಲ್ಲಿರುವ ಕಿರು ಸೇತುವೆಯ ಬಳಿ ರರಸ್ತೆ ಕುಸಿದಿದ್ದು, ಸದ್ಯ ಬ್ಯಾರಿಕೇಡ್ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Rain News | ಕೇಂದ್ರಕ್ಕೆ ಕಾಯದೇ ಮಳೆ ಹಾನಿ ಪರಿಹಾರ ಕೊಡುತ್ತೇವೆ; ಸಚಿವ ಆರ್‌.ಅಶೋಕ್

Exit mobile version