ಶಿವಮೊಗ್ಗ: ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು ಶಿವಮೊಗ್ಗ ಜಿಲ್ಲೆಯ ಹಲವೆಡೆಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ತೀರ್ಥಹಳ್ಳಿ, ಸಾಗರ, ಸೊರಬ ತಾಲೂಕುಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು ಜನತೆ ಆತಂಕದಿಂದ ದಿನದೂಡುವಂತಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಟಿವಿಎಸ್ ಶೋರೂಮ್ ಬಳಿ ಬುಧವಾರ (ಜು.೬) ಪ್ರದೀಪ್ ಎಂಬುವವರ ಮನೆಯ ಗೋಡೆ ಕುಸಿದಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿವೆ. ಘಟನೆ ಸಂದರ್ಭದಲ್ಲಿ ಪ್ರದೀಪ್, ಅವರ ಪತ್ನಿ ಮತ್ತು ಮೂವರು ಮಕ್ಕಳು ಮನೆಯಲ್ಲಿದ್ದರು. ಅದೃಷ್ಟವಶಾತ್ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿಯಲ್ಲಿ ಆಗುಂಬೆ ಗ್ರಾ.ಪಂ.ವ್ಯಾಪ್ತಿಯ ತಲ್ಲೂರು ಗ್ರಾಮದಲ್ಲಿ ಹಂದಲಸಿನ ರತ್ನಮ್ಮ ಅವರ ಮನೆ ಮೇಲೆ ಮರ ಉರುಳಿದೆ. ಮನೆಗೆ ತೀವ್ರ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ | Weather Report: ಮುಂದಿನ 24 ಗಂಟೆ ಭಾರಿ ಮಳೆ ಸಾಧ್ಯತೆ, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಜಡೆ ಹೋಬಳಿ ವ್ಯಾಪ್ತಿಯ ಸಾಬಾರ ಗ್ರಾಮದಲ್ಲಿ ಸವಿತಾ ಎಂಬುವವರಿಗೆ ಸೇರಿದ ಮನೆಯ ಹಿಂಭಾಗದ ಗೋಡೆ ಕುಸಿದಿದೆ. ಸೊರಬ ಪುರಸಭೆ ವ್ಯಾಪ್ತಿಯ ಸೀಗೇಹಳ್ಳಿ ಗ್ರಾಮದಲ್ಲಿ ಶ್ರೀನಿವಾಸ ಅವರ ಮನೆಗೆ ಹಾನಿ ಆಗಿದೆ. ಕಸಬಾ ಹೋಬಳಿಯ ತ್ಯಾವಗೋಡು ಗ್ರಾಮದ ಶಿವಾಜಿಗೌಡ ಹಾಗೂ ಕುಪ್ಪಗಡ್ಡೆ ಗ್ರಾಮದ ಸೋಮಪ್ಪ ಅವರ ಮನೆಯ ಗೋಡೆಗಳು ಕುಸಿದಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿಯ ತುಂಗಾನದಿಯ ನಡುವಿನ ಶ್ರೀರಾಮಮಂಟಪ ಮುಳುಗುವ ಹಂತ ತಲುಪಿದೆ. ತುಂಗಾ ಜಲಾಶಯದಿಂದ ಗುರುವಾರ (ಜು.೭) 45939 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಆಗುಂಬೆಯಲ್ಲೂ ನಿರಂತರ ಮಳೆಯಾಗುತ್ತಿದ್ದು, ಮಾಲತಿ ನದಿಯ ಹರಿವು ಹೆಚ್ಚಳ ಕಂಡಿದೆ.
ಶಾಲೆಗೆ ರಜೆ: ಜಿಲ್ಲೆಯಾದ್ಯಂತ ಮಳೆ ಮುಂದುವರಿದ ಕಾರಣ ಡಿಸಿ ಸೂಚನೆಯಂತೆ ಶಿವಮೊಗ್ಗ ಡಿಡಿಪಿಐ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ನಗರಸಭೆಯಿಂದ ವಿಪತ್ತು ನಿರ್ವಹಣಾ ತಂಡ
ಶಿವಮೊಗ್ಗದಲ್ಲಿ ಮಳೆ ಅನಾಹುತ ತಪ್ಪಿಸಲು ನಗರಸಭೆಯಿಂದ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ. ಸಾಗರದಲ್ಲಿ ಕಳೆದೆರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಪ್ರವಾಹ ಭೀತಿ, ತಗ್ಗು ಪ್ರದೇಶಗಳು ಜಲಾವೃತವಾಗುವ ಸಂಭವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ತಮ್ಮ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಸಾಗರ ನಗರಸಭೆ ಆಯುಕ್ತ ರಾಜು ಡಿ ಬಣಕಾರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | Rain News | ಕೊಡಗಿನಲ್ಲಿ ಮಳೆ ಅವಾಂತರ: ಮನೆಯ ಗೋಡೆ ಬಿದ್ದು ವೃದ್ಧೆಗೆ ಗಂಭೀರ ಗಾಯ