ಚಿಕ್ಕಮಗಳೂರು: ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರ (Rain News) ಮುಂದುವರಿದಿದೆ. ಹಲವೆಡೆ ರಸ್ತೆಗಳು ಜಲಾವೃತವಾಗಿ ಸಂಪರ್ಕ ಕತ್ತರಿಸಿದೆ. ಶಾಲೆಗಳಿಗೆ ರಜೆ ಸಾರಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಐದು ಹೋಬಳಿಗಳಾದ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಕಳಸ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆಯನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಾಡಿದ್ದಾರೆ.
ಹಾಸನದಲ್ಲಿ ಶಾಲೆಗಳಿಗೆ ರಜೆ
ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ವಳವಾಗಿದೆ. ಜಲಾಶಯಕ್ಕೆ 23,142 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟು ಗರಿಷ್ಠ 2922 ಅಡಿಗಳನ್ನು ಹೊಂದಿದ್ದು, ಸದ್ಯ ಡ್ಯಾಂನಲ್ಲಿ 2903.05 ಅಡಿ ನೀರಿದೆ.
ಹಾಸನ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗು ಅಂಗನವಾಡಿಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಿ ಹಾಸನ ಡಿಸಿ ಸಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಗಂಗಾವಳಿ ನದಿ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದೆ. ಯಲ್ಲಾಪುರ, ಅಂಕೋಲಾ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಆತಂಕ ಉಂಟಾಗಿದೆ. ಡೋಂಗ್ರಿ, ಶೆವಕಾರ, ಕಲ್ಲೇಶ್ವರ, ಕಮ್ಮಾಣಿ, ಹಳವಳ್ಳಿ ಗ್ರಾಮಕ್ಕೆ ಪ್ರವಾಹ ಭೀತಿ ಕಂಡುಬಂದಿದೆ.
2019, 2021ರಲ್ಲಿ ಗಂಗಾವಳಿ ಪ್ರವಾಹಕ್ಕೆ ಜನರು ಮನೆಮಠ ಕಳೆದುಕೊಂಡಿದ್ದರು. ಈಗ ಮತ್ತೆ ಪ್ರವಾಹ ಮಟ್ಟಕ್ಕೆ ಗಂಗಾವಳಿ ಹರಿವು ಏರುತ್ತಿದೆ. ಆತಂಕದಲ್ಲಿ ನದಿ ಪಾತ್ರದ ನಿವಾಸಿಗಳು ಕಾಲ ಕಳೆಯುತ್ತಿದ್ದಾರೆ. 2021ರಲ್ಲಿ ಉಂಟಾದ ಪ್ರವಾಹಕ್ಕೆ ಗುಳ್ಳಾಪುರ, ಕಲ್ಲೇಶ್ವರ ಸೇತುವೆ ಕೊಚ್ಚಿ ಹೋಗಿತ್ತು. ಹೊಸ ಸೇತುವೆ ಇನ್ನೂ ನಿರ್ಮಾಣವಾಗಿಲ್ಲ.
ಕೊಡಗು ರಸ್ತೆಗಳು ಮುಳುಗಡೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರಿದಿದೆ. ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ನಿರಂತರ ಮಳೆಯಾಗುತ್ತಿದ್ದು, ಭಾರಿ ಮಳೆ ಹಿನ್ನೆಲೆ ಕಾವೇರಿ ನದಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಭಾಗಮಂಡಲ-ತಲಕಾವೇರಿ ನಾಪೋಕ್ಲು-ತಲಕಾವೇರಿ ರಸ್ತೆ ಬಂದ್ ಆಗಿದೆ.
ಭಾಗಂಡಲ – ತಲಕಾವೇರಿ ರಸ್ತೆಮೇಲೆ 2 ಅಡಿ ನೀರು, ನಾಪೋಕ್ಲು-ತಲಕಾವೇರಿ ರಸ್ತೆ ಮೇಲೆ 3/4 ಅಡಿ ನೀರು ನಿಂತಿದೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗು ನೀರು ಏರಿಕೆಯಾಗಿದೆ. ಮಳೆ ಹೆಚ್ಚಾದಲ್ಲಿ ಮತ್ತಷ್ಟು ನೀರು ಏರುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬೋಟ್ ವ್ಯವಸ್ಥೆ ಮಾಡಿದೆ. ಒಂದು ತಿಂಗಳಿಂದ ಭಾಗಮಂಡಲದಲ್ಲಿ ಗೃಹ ರಕ್ಷಕದಳ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.