ಮಂಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ (Rain News) ಸುಳ್ಯ ತಾಲೂಕಿನ ಹಲವು ಭಾಗಗಳು ದ್ವೀಪವಾಗಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಜನ-ಜೀವನ ಅಸ್ತವ್ಯಸ್ತಗೊಂಡಿದ್ದು, ತಡರಾತ್ರಿ ಸುರಿದ ಭಾರಿ ಮಳೆಗೆ ಸಂಪಾಜೆ, ಕೊಯನಾಡು, ಕಲ್ಲುಗುಂಡಿಯಲ್ಲಿ ಜಲ ಪ್ರವಾಹ ಉಂಟಾಗಿದೆ.
ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದು ಇಡೀ ಕಲ್ಲುಗುಂಡಿ ಪೇಟೆ ನೀರಿನಲ್ಲಿ ಮುಳುಗಿದೆ. ತಗ್ಗು ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದು ಮನೆಗಳು, ಅಂಗಡಿ ಮುಂಗಟ್ಟುಗಳು ನೀರಿನಲ್ಲಿ ಮುಳುಗಿ ಹೋಗಿದೆ. ಕಲ್ಲುಗುಂಡಿಯಲ್ಲಿ ಆಳೆತ್ತರದಲ್ಲಿ ನೀರು ತುಂಬಿ ಹರಿದಿದೆ.
ಜಲಾವೃತವಾದ ಮನೆಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಕರೆತರುವ ಪ್ರಯತ್ನ ನಡೆಸಲಾಯಿತು. ಮನೆಗಳಿಗೆ ಕೆಸರು ಮಿಶ್ರಿತ ನೀರು ನುಗ್ಗಿದ್ದು, ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಇದನ್ನೂ ಓದಿ | ಮುಂದುವರಿದ ಭಾರಿ ಮಳೆ | ಗುಡ್ಡಕುಸಿತಕ್ಕೆ ಇಬ್ಬರು ಮಕ್ಕಳ ಬಲಿ, ಹಲವೆಡೆ ನೆರೆ ಭೀತಿ
ಕೊಯನಾಡುವಿನಲ್ಲಿ ಕೆಲವು ಮನೆಗಳು ಜಲಾವೃತವಾಗಿದ್ದು, ಕಲ್ಮಕಾರಿನ ಸಂತೆಡ್ಕ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದ್ದು, ಆ ಭಾಗದಲ್ಲಿ 150ಕ್ಕೂ ಅಧಿಕ ಮನೆಗಳಿದ್ದು, ಮಕ್ಕಳು, ವೃದ್ದರು, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕಲ್ಲಾಜೆಯಲ್ಲಿ ಮನೆಯೊಂದು ಕುಸಿದಿರುವ ವರದಿಯಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಅಧಿಕಾರಿಗಳ ತಂಡ ಸುಬ್ರಮಣ್ಯದಲ್ಲಿದ್ದು, ಪ್ರವಾಹ ಪರಿಸ್ಥಿತಿಯ ನಿಯಂತ್ರಣಕ್ಕೆ ನೇತೃತ್ವ ವಹಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಎನ್‌ಡಿಆರ್‌ಎಫ್ ತಂಡ ಈಗಾಗಲೇ ಸುಬ್ರಮಣ್ಯದಲ್ಲಿದ್ದು, ಕಾರ್ಯವನ್ನು ನಿರ್ವಹಿಸುತ್ತಿದೆ. ಜತೆಗೆ ಎಸ್‌ಡಿಆರ್‌ಎಫ್ ತಂಡ ಕೊಲ್ಲಮಗುರು, ಸುಬ್ರಹ್ಮಣ್ಯಕ್ಕೆ ಅಗಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಸುಳ್ಯ ಹಾಗೂ ಕಡಬ ತಾಲೂಕಿನ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತ ವ್ಯಾಪಕ ಮಳೆ ಆಗಿರುವುದರಿಂದ ದೇವಸ್ಥಾನದ ಒಳಗೆ ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿ ಗುಡ್ಡಜರಿದು ಎರಡು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ | ಮುಂದುವರಿದ ಮಳೆ ಆರ್ಭಟ; ಉತ್ತರ ಕನ್ನಡದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ಅಪಾಯದಲ್ಲಿ