ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಬುಧವಾರವೂ (ಜುಲೈ 6) ಮುಂದುವರಿದಿದೆ. ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಅನಾಹುತಗಳು ಹೆಚ್ಚಾಗುತ್ತಿವೆ. ಸೋಮವಾರ ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಚಿಕ್ಕಮಗಳೂರು ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹಾಸನದಲ್ಲಿ ವೃದ್ಧೆಯೊಬ್ಬರ ಮನೆಗೋಡೆ ಕುಸಿದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಬಾಲಕಿ ಸುಪ್ರೀತಾ 40 ಗಂಟೆಗಳು ಕಳೆದರೂ ಪತ್ತೆಯಾಗಿಲ್ಲ. ಹಳ್ಳದಲ್ಲಿ ಐದಾರು ಕಿಲೋಮೀಟರ್ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ. 30ಕ್ಕೂ ಹೆಚ್ಚು ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈಗ ಹೊಸಪೇಟೆ, ಕಟ್ಟೆಹೊಳೆ, ಹಿರೇಬಿದ್ದರೇ, ಸಿದ್ದರಹಳ್ಳಿ ಭಾಗದಲ್ಲಿ ನಿರಂತರ ಶೋಧ ಶುರುವಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಮಲೆನಾಡಿನ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ, ಕಳಸ, ಎನ್.ಆರ್. ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಜುಲೈ 6 ರಿಂದ ಜುಲೈ 9ರವರೆಗೆ ರಜೆ ಘೋಷಿಸಿದ್ದು, ತಾಲೂಕಿನ ಲಕ್ಯಾ, ಅಂಬಳೆ ಹೋಬಳಿ ಹೊರತುಪಡಿಸಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Rain News | ಕೊಡಗಿನಲ್ಲಿ ಮಳೆ ಅವಾಂತರ: ಮನೆಯ ಗೋಡೆ ಬಿದ್ದು ವೃದ್ಧೆಗೆ ಗಂಭೀರ ಗಾಯ
ಎಡಬಿಡದೇ ಮಳೆ ಸುರಿಯುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ ಕಂಡಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿ ಪಟ್ಟಣದ ನದಿ ಪಾತ್ರದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಮುಖ್ಯ ಸೇತುವೆ ಮುಳುಗಡೆಯಾಗಿದೆ. ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಹಾಸನ ಜಿಲ್ಲೆಯ ಹಲವೆಡೆ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಅರಕಲಗೂಡು ತಾಲೂಕಿನ ಸಂತೆಮರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮಿ ಗ್ರಾಮದಲ್ಲಿ ಕಾಳಮ್ಮ ಎಂಬವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದ ವೃದ್ದೆ ಆಗಷ್ಟೆ ಹೊರಗೆ ಬಂದು ದನಕರುಗಳನ್ನು ಕಟ್ಟುತ್ತಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಕಾಳಮ್ಮ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Weather Report: ಕರಾವಳಿ ಭಾಗಕ್ಕೆ ಮಳೆಯ ರಿಲೀಫ್: ಕೆಲವು ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಘೋಷಣೆ
ಕೊಡಗಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಶಾಲಾ ಕಾಲೇಜುಗಳಿಗೆ ಬುಧವಾರ (ಜುಲೈ 6) ಮಾತ್ರ ಒಂದು ದಿನದ ರಜೆಯನ್ನು ಜಿಲ್ಲಾಡಳಿತ ಘೋಷಿಸಿದೆ. ಭೂಮಿ ಕಂಪಿಸಿದ ಭಾಗಮಂಡಲ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಆಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ನಾಪೋಕ್ಲು ಭಾಗಮಂಡಲ ರಸ್ತೆ ಮೇಲೆ ಒಂದೂವರೆ ಅಡಿ ನೀರು ನಿಂತಿದೆ. ಮಳೆಯ ರಭಸಕ್ಕೆ ಮನೆ ಮೇಲೆ ಮರಗಳು ಬೀಳುತ್ತಿವೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಕಾರವಾರದಲ್ಲಿ ಮಂಗಳವಾರ( ಜುಲೈ 5) ರಾತ್ರಿಯಂದಲೇ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ವರುಣ ಶಾಂತವಾಗಿದ್ದಾನೆ. ಎರಡು ದಿನ ಭಾರಿ ಮಳೆಯಿಂದ ಜನತೆ ಕಂಗಾಲಾಗಿದ್ದರು. ಜುಲೈ 8ರವರೆಗೆ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗೋಕರ್ಣದ ಮಾದನಗೇರಿಯಲ್ಲಿ ಹೆದ್ದಾರಿಯಂಚಿಗೆ ಗುಡ್ಡ ಕುಸಿದಿದ್ದು, ಐಆರ್‌ಬಿ ಸಿಬ್ಬಂದಿಯಿಂದ ತೆರವು ಕಾರ್ಯಚಾರಣೆ ಪ್ರಾರಂಭಗೊಂಡಿದೆ.
ಇದನ್ನೂ ಓದಿ |Rain fury: ಮಳೆಗೆ ತತ್ತರಿಸಿದ ಮುಂಬಯಿ, ಇನ್ನಷ್ಟು ವರುಣಾರ್ಭಟದ ಮುನ್ನೆಚ್ಚರಿಕೆ