Site icon Vistara News

Rain News | ನದಿಗಳಲ್ಲಿ ಹೆಚ್ಚಾದ ನೀರಿನ ಹರಿವು; ಹಲವು ಗ್ರಾಮ, ಸೇತುವೆಗಳು ಜಲಾವೃತ

ಜಲಾವೃತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ (Rain News) ಮುಂದುವರಿದಿರುವುದರಿಂದ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನದಿ ತೀರದ ಪ್ರದೇಶಗಳು ಹಾಗೂ ಸೇತುವೆಗಳು ಜಲಾವೃತವಾಗಿ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಹಾಗೆಯೇ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಮನೆಗಳಿಗೆ ಹಾನಿಯಾಗಿ ಮರಗಳು ನೆಲಕ್ಕುರುಳಿವೆ.

ಭದ್ರಾವತಿಯ ಹೊಸಸೇತುವೆ ಸಂಪೂರ್ಣ ಮುಳುಗಡೆ
ಶಿವಮೊಗ್ಗ: ಜಿಲ್ಲೆಯ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದರಿಂದ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹೊಸಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ನಗರದ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಮೇಲಿನ ಸಂಚಾರ ಸ್ಥಗಿತವಾಗಿದೆ.

ಜಲಾಶಯದ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಈ ಬಾರಿ ಜಲಾಶಯ ಬಹುಬೇಗನೆ ಭರ್ತಿಯಾಗಿದೆ. ನದಿಗೆ ಹೆಚ್ಚುವರಿ ಬಿಟ್ಟ ನೀರು ನಗರ ಪ್ರವೇಶಿಸುತ್ತಿದ್ದಂತೆ ಹೊಸಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಸೇತುವೆ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿ ಸೇತುವೆ ಮೇಲಿನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಹಳೇಸೇತುವೆ ಸಮೀಪದ ಸಂಗಮೇಶ್ವರ ದೇವಸ್ಥಾನ ಕೂಡ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕವಿದೆ.

ಕವಲಗುಂದಿ ಜಲಾವೃತವಾದ ಹಿನ್ನೆಲೆಯಲ್ಲಿ 30 ಮನೆಯ 120 ಜನರನ್ನು ಹುತ್ತಾ ಕಾಲನಿಯ ಒಕ್ಕಲಿಗರ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಹುತ್ತಾ ಕಾಲನಿಯ ಸೋಷಿಯಲ್ ವೆಲ್‌ಫೇರ್ ಹಾಸ್ಟೆಲ್‌ನ 35 ಮಕ್ಕಳನ್ನು ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಎಕಿನ್ಷಾ ಕಾಲನಿ ಹಾಗೂ ಗುಂಡೂರಾವ್ ಶೆಡ್‌ಗೂ ಭದ್ರಾ ನೀರು ನುಗ್ಗಿದ್ದು, ಇಲ್ಲಿನ 100 ಜನರನ್ನು ಉಳ್ಖವರ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ಭದ್ರಾವತಿ ಮತ್ತು ಹೊಳೆಹೊನ್ನೂರಿನಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಹನುಮಂತ ನಗರದ 28 ಜನರನ್ನು ವಳ್ಳುವರ್ ಸಮುದಾಯ ಭವನಕ್ಕೆ, ಎಕೆ ಕಾಲನಿಯ 20 ಜನರನ್ನು ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ.

ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ
ಕೂಲಿ ಕಾರ್ಮಿಕ ಅಬ್ದುಲ್ ಜಬ್ಬಾರ್ ಮನೆಗೆ ಮಳೆಯಿಂದ ಹಾನಿಯಾಗಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಹೇಮಾವತಿ ನದಿಯ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದ ಐಗೂರು ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ಕುಂಬರಳ್ಳಿ-ಹೆತ್ತೂರು ನಡುವಿನ ಸೇತುವೆ ಮುಳುಗಡೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆ 3 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ಹತ್ತಾರು ಹಳ್ಳಿಗಳ ಜನರು ಓಡಾಡಲು ಪರದಾಡುವಂತಾಗಿದೆ. ಕೆಲವು ವಾಹನ ಸವಾರರು ಧೈರ್ಯ ಮಾಡಿ ಸೇತುವೆ ದಾಟುತ್ತಿರುವುದೂ ಕಂಡುಬಂದಿದೆ. ಮಳೆ ಹಿನ್ನೆಲೆಯಲ್ಲಿ ಆಲೂರು, ಸಕಲೇಶಪುರ, ಅರಕಲಗೂಡು, ಬೇಲೂರು ತಾಲೂಕು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹಾಸನ ಜಿಲ್ಲೆಯ ವಿವಿಧೆಡೆ ಕಾಫಿ, ಅಡಕೆ ತೋಟಗಳು ಜಲಾವೃತವಾಗಿವೆ.

ಚಿಕ್ಕಮಗಳೂರಿನಲ್ಲಿ ಕುಸಿದ ರಾಜ್ಯ ಹೆದ್ದಾರಿ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಗೆ ಶೃಂಗೇರಿ ತಾಲೂಕಿನ ನೇರಳೆಕೊಡಿಗೆ ಸಮೀಪ 200 ಅಡಿ ರಾಜ್ಯ ಹೆದ್ದಾರಿ ರಸ್ತೆ ಕುಸಿದಿದೆ. ಹೀಗಾಗಿ ಶೃಂಗೇರಿ-ಆಗುಂಬೆ ಮಾರ್ಗದ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೀಗಾಗಿ ಶೃಂಗೇರಿ ತಾಲೂಕು ಹಾಗೂ ಮೂಡಿಗೆರೆ, ಕೊಪ್ಪ ತಾಲೂಕಿನ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ.

ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್ ಪುರ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ದೇವರಮನೆಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 350 ಮಿ.ಮೀ. ಮಳೆಯಾಗಿದೆ. ಬೈದುವಳ್ಳಿ ಗ್ರಾಮದಲ್ಲಿ ರಸ್ತೆ ಮೇಲೆ ನೀರು ನುಗ್ಗಿದೆ. ಮೂಡಿಗೆರೆ ತಾಲೂಕಿನ ದೇವರಮನೆ, ಬೈದುವಳ್ಳಿ ಗ್ರಾಮಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳಸ ತಾಲೂಕಿನ ಬಲಿಗೆ ಗ್ರಾಮದಲ್ಲಿ ಭೂಕುಸಿತವಾಗಿದ್ದು, ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಗ್ರಾಮದಲ್ಲಿ ಮಂಜುನಾಥ್ ಎಂಬುವವರ ಮನೆಯ ಚಾವಣಿ ಕುಸಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳ್ಳೂರು ಬಳಿ ರಸ್ತೆಯಲ್ಲಿ ಮರ ಉರುಳಿದೆ.

ಇದನ್ನೂ ಓದಿ | Rain News | ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಹೆದ್ದಾರಿಯೇ ಕೊಚ್ಚಿ ಹೋಯ್ತು!

ತ್ರಿವೇಣಿ ಸಂಗಮ ಜಲಾವೃತ
ಕೊಡಗು: ಜಿಲ್ಲೆಯ ಬ್ರಹ್ಮಗಿರಿ ತಪ್ಪಲಿನಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಗುರುವಾರದಿಂದ ಭಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕ ಕಡಿತಹೊಂಡಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಮಡಿಕೇರಿ-ಭಾಗಮಂಡಲ ರಸ್ತೆಯ ಮೇಲೆ 1 ಅಡಿ ನೀರು ಹರಿಯುತ್ತಿದ್ದು, ಈ ಮಾರ್ಗದ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.

ಹಲವೆಡೆ ಗಾಳಿ ಮಳೆಗೆ ವಿವಿಧೆಡೆ ರಸ್ತೆ ಹಾಗೂ ಮನೆಗಳ ಮೇಲೆ ಮರಗಳು ಬಿದ್ದಿವೆ. ಸೋಮವಾರಪೇಟೆಯಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಕೂತಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದಿದೆ. ಭಾರಿ ಗಾಳಿಗೆ ಸೋಮವಾರಪೇಟೆ ತಾಲೂಕು ಗೌಡಳ್ಳಿಯಲ್ಲಿ ಮರ ಬಿದ್ದು ಸುಧೀರ್ ಎಂಬುವವರ ಮನೆಗೆ ಹಾನಿಯಾಗಿದೆ.
ಸಿದ್ದಾಪುರ, ನೆಲ್ಯಹುದಿಕೇರಿ ನದಿ ತೀರದಲ್ಲಿ‌ ಪ್ರವಾಹ ಭೀತಿ ಎದುರಾಗಿದ್ದು, ಗುಹ್ಯ ಕಕ್ಕಟಕಾಡು ರಸ್ತೆ, ಕರಡಿಗೋಡು ಚಿಕ್ಕನಳ್ಳಿ ಪೈಸಾರಿಗೆ ತೆರಳುವ ರಸ್ತೆ ಜಲಾವೃತವಾಗಿವೆ.

ಚಿಕ್ಕೋಡಿಯ ಕಲ್ಲೋಳದ ದತ್ತ ಮಂದಿರ ಭಾಗಶಃ ಜಲಾವೃತ
ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮ ಕಲ್ಲೋಳದ ದತ್ತ ಮಂದಿರ ಭಾಗಶಃ ಜಲಾವೃತವಾಗಿದೆ. ಹೀಗಾಗಿ ನದಿಗೆ ಇಳಿಯಂತೆ ಸಾರ್ವಜನಿಕರಿಗೂ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ನದಿ ತೀರದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಕೃಷ್ಣಾ ನದಿಗೆ 1.30 ಲಕ್ಷ ಕ್ಯೂಸೆಕ್ ಒಳಹರಿವಿದ್ದು, ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದರೆ ಕೃಷ್ಣಾ ತೀರದಲ್ಲಿ ಪ್ರವಾಹದ ಎದುರಾಗಲಿದೆ. ಕೃಷ್ಣಾ ನದಿ ನೀರಿನಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಅಥಣಿ, ಚಿಕ್ಕೋಡಿ, ರಾಯಭಾಗ ತಾಲೂಕಿನ ನದಿ ತೀರದ ಜನರಲ್ಲಿ ಆತಂಕ ಶುರುವಾಗಿದೆ. ಮೂಡಲಗಿ ತಾಲೂಕಿನ ಅವರಾಧಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮಳುಗಡೆಯಾಗಿದೆ. ಹೀಗಾಗಿ ಅವರಾಧಿ-ಮಹಾಲಿಂಗಪೂರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಉಕ್ಕಿ ಹರಿಯುತ್ತಿದೆ ವರದಾ ನದಿ

ಧಾರವಾಡ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ, ಉರ್ದು ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ತಾಲೂಕಿನ ಗರಗ ಗ್ರಾಮದಲ್ಲಿ ಮಡಿವಾಳಪ್ಪ ಗೊವನಕೊಪ್ಪ ಎಂಬುವವರ ಮನೆ ಗೋಡೆ ಏಕಾಏಕಿ ಕುಸಿದಿದೆ. ಹಾವೇರಿ ಜಿಲ್ಲೆಯಲ್ಲಿ ಮುಂದುವರಿದ ಮಳೆಯಿಂದ ವರದಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಕೂಡಲ ಗ್ರಾಮದ ಸೇತುವೆ ಮುಳುಗಡೆಯಾಗಿ,ಕೂಡಲ, ನಾಗನೂರ ನಡುವೆ ಸಂಪರ್ಕ ಕಡಿತಗೊಂಡಿದೆ. ಹಾನಗಲ್ ತಾಲೂಕಿನ ಚಿಕ್ಕೇರಿ ಹೊಸಳ್ಳಿ ಗ್ರಾಮದಲ್ಲಿ ನೀಲವ್ವ ಈರಪ್ಪ ಗಾಜಿಯವರ ಹಂಚಿನ ಮನೆ ಕುಸಿದಿದೆ. ಕುಮದ್ವತಿ ನದಿ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ನಾಲಾ ಪಕ್ಕದ ಬಡಾವಣೆಗಳು ಜಲಾವೃತ

ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಬಳ್ಳಾರಿ ನಾಲಾದಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದೆ. ಹೀಗಾಗಿ ನಾಲಾ ಪಕ್ಕದ ಬಡಾವಣೆಗಳು ಜಲಾವೃತವಾಗಿದ್ದು, ಸಾಯಿ ಕಾಲನಿಯ 80ಕ್ಕೂ‌ ಹೆಚ್ಚು ಮನೆಗಳು‌ ಮುಳುಗುವ ಆತಂಕ ಎದುರಾಗಿದೆ. ಅದೇ ರೀತಿ ನಾಲಾ ನೀರಿನಿಂದ ಸಾವಿರಾರು ಎಕರೆ ಭತ್ತದ ಬೆಳೆ ನೀರಿನಲ್ಲಿ ‌ಮುಳುಗಡೆಯಾಗಿದೆ. ಮನೆಗಳನ್ನು ನೀರು ಸುತ್ತುವರಿದ ಪರಿಣಾಮ ರಸ್ತೆಗಳು ಬಂದ್ ಆಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಲಪ್ರಭಾ, ಪಾಂಡರಿ ನದಿಗಳು ತುಂಬಿ ಹರಿಯುತ್ತಿದ್ದು, ಖಾನಾಪುರ ತಾಲೂಕಿನಲ್ಲಿರುವ ಹೆಬ್ಬಾನಟ್ಟಿ ಗ್ರಾಮ ಮಾರುತಿ ದೇವಸ್ಥಾನ ಗರ್ಭಗುಡಿಗೆ ನೀರು ನುಗ್ಗಿದೆ. ಪ್ರತಿ ವರ್ಷ ಮಳೆಯಿಂದ ಮೂರು ತಿಂಗಳು ಬಂದ್ ಆಗುತ್ತಿದೆ. ಮಾರುತಿ ದೇವಸ್ಥಾನ ಹಿಂಬದಿಯ ಶಿವ ಮಂದಿರವೂ ಮುಳುಗಡೆಯಾಗಿದೆ. ಮಳೆಯಿಂದ ಬೆಳಗಾವಿ, ಖಾನಾಪುರ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಯಾದಗಿರಿ ಜಿಲ್ಲೆಯ ವೀರಾಂಜನೇಯ, ಕಂಗೇಶ್ವರ ದೇಗುಲಗಳು ಜಲಾವೃತವಾಗಿವೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

ಉತ್ತರಕನ್ನಡ: ಜಿಲ್ಲೆಯ ಹೊನ್ನಾವರದ ಅರೇಅಂಗಡಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದಿದೆ. ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಸಾಲ್ಕೋಡ, ಕೆರೆಕೋಣ, ದರ್ಬೆಜಡ್ಡಿ, ತೊಳಸಾಣಿ ಸೇರಿ ಹಲವು ಗ್ರಾಮಗಳ ಸಂಚಾರ ಬಂದ್ ಮಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಮರ ತೆರವಿಗೆ ಸೂಚನೆ ನೀಡಿದ್ದಾರೆ. ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಗೆ ಗ್ರಾಮದಲ್ಲಿ ಗುಡ್ಡ ಕುಸಿದು ಸುಂದರ ಪೂಜಾರಿ ಎಂಬುವವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕವಡಿಕೆರೆ ಒಡ್ಡು ಹಾನಿಗೊಂಡ ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿರಾಡಿಘಾಟ್ ರಸ್ತೆ ಸಂಚಾರ ನಿಷೇಧ ಮುಂದುವರಿಕೆ

ಹಾಸನ: ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ‌ ಇತ್ತೀಚೆಗೆ ಭೂಕುಸಿತ ಉಂಟಾಗಿದ್ದರಿಂದ ಮುಂದಿನ ಆದೇಶದವರೆಗೆ ಶಿರಾಡಿಘಾಟ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತಾತ್ಕಾಲಿಕ ದುರಸ್ತಿ ಕಾರ್ಯ ಸ್ಥಗಿತವಾಗಿದೆ. ಸಕಲೇಶಪುರ ಪಟ್ಟಣದ ಹೇಮಾವತಿ ನದಿ ದಂಡೆಯ ಹೊಳೆ ಮಲ್ಲೇಶ್ವರನಿಗೆ ಜಲ ದಿಗ್ಬಂಧನವಾಗಿದೆ. ಭಾರಿ ಮಳೆಯಿಂದ ಹೇಮಾವತಿ ನದಿ ನೀರಲ್ಲಿ ದೇಗುಲದ ಮೆಟ್ಟಿಲು ಮುಳುಗಿದೆ.

ಇದನ್ನೂ ಓದಿ | Weather Report | ಬೆಳಗಾವಿ, ಹಾಸನ ಸೇರಿ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುನ್ಸೂಚನೆ

Exit mobile version