ಮಂಗಳೂರು: ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಲವು ಅವಾಂತರಗಳನ್ನು (Rain News) ಸೃಷ್ಟಿಸಿದೆ. ನೀರಿನ ರೌದ್ರಾವತಾರ ಒಂದು ಕಡೆಯಾದರೆ ಬಲ ಕಳೆದುಕೊಂಡು ಕುಸಿಯುತ್ತಿರುವ ಗುಡ್ಡಗಳು (Land slide) ಕೂಡಾ ಆಪತ್ತನ್ನು ಸೃಷ್ಟಿ ಮಾಡುತ್ತಿವೆ. ಗುರುವಾರ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದಲ್ಲಿ ಮನೆಯೊಂದರ ಮೇಲೆ ಪಕ್ಕದ ಗುಡ್ಡ ಕುಸಿದು ಬಿದ್ದಿದ್ದು, ಅದರಡಿಯಲ್ಲಿ ಇಬ್ಬರು ಮಹಿಳೆಯರು ಸಿಲುಕಿದ್ದರು. ಇವರ ಪೈಕಿ ಈಗ ಒಬ್ಬರನ್ನು ರಕ್ಷಿಸಲಾಗಿದ್ದರೆ, ಇನ್ನೊಬ್ಬರು ಪ್ರಾಣ (Woman dead) ಕಳೆದುಕೊಂಡಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಘಟನೆ ನಡೆದಿದೆ. ಮನೆ ಮೇಲೆ ಗುಡ್ಡ ಕುಸಿದು ಮನೆಯೊಳಗೆ ಇಬ್ಬರು ಮಹಿಳೆಯರು ಸಿಲುಕಿದ್ದರು. ಇವರನ್ನು ರಕ್ಷಿಸುವ ಕಾರ್ಯಾಚರಣೆ ನಡೆದು 20 ವರ್ಷದ ಶಫಾ ಎಂಬ ಯುವತಿಯನ್ನು ಸ್ಥಳೀಯರು ಬಚಾವು ಮಾಡಿದ್ದರು. ಆದರೆ, ಮನೆಯೊಳಗೆ ಸಿಲುಕಿದ್ದ ಶಫಾ ಅವರ ತಾಯಿ ಝರೀನಾ(46) ಹೊರಬರಲಾಗದೆ ಮೃತಪಟ್ಟಿದ್ದಾರೆ. ಇದೀಗ ಮಣ್ಣಿನಡಿ ಸಿಲುಕಿ ಝರೀನಾ ಅವರ ಮೃತದೇಹವನ್ನು ಪೊಲೀಸರು ಮತ್ತು ಸ್ಥಳೀಯರು ಹೊರತೆಗೆದಿದ್ದಾರೆ.
ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರ ಕಾರ್ಯಾಚರಣೆಯಿಂದ ಒಬ್ಬ ಮಹಿಳೆಯ ರಕ್ಷಣೆಯಾಗಿದೆ. ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಐದನೇ ಬಲಿಯಾಗಿದೆ.
ಒಂದೇ ದಿನದಲ್ಲಿ ಇನ್ನೂ ನಾಲ್ವರು ಬಲಿ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಇನ್ನೂ ನಾಲ್ವರು ಮಹಿಳೆಯ ಹೊಡೆತ ಮತ್ತು ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.
ಕಾಲು ಜಾರಿ ಬಿದ್ದು ಇಬ್ಬರು ನೀರುಪಾಲು: ಉತ್ತರ ಕನ್ನಡದ ಕುಮಟಾದ ಬೆಟ್ಕುಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಗದ್ದೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಸಾವಿಗೀಡಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬೆಟ್ಕುಳಿಯಲ್ಲಿ ಭಾರೀ ಮಳೆಯಿಂದಾಗಿ ಜಲಾವೃತವಾಗಿದ್ದ ಗದ್ದೆಗಳಲ್ಲಿ ನಡೆದು ಹೋಗುತ್ತಿದ್ದಾಗ ಇವರು ಜಾರಿ ಬಿದ್ದಿದ್ದು, ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮೃತರನ್ನು ಸತೀಶ ಪಾಂಡುರಂಗ ನಾಯ್ಕ(38), ಉಲ್ಲಾಸ ಗಾವಡಿ(50) ಎಂದು ಗುರುತಿಸಲಾಗಿದೆ.
ಹೊಳೆಪಾಲಾದ ಕಾರ್ಮಿಕ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆಲೆಟ್ಟಿಯ ಕೂರ್ನಡ್ಕ ಬಳಿ ಕೇರಳ ಮೂಲದ ಕಾರ್ಮಿಕ ಹೊಳೆಯ ಸಂಕ ದಾಟುತ್ತಿರುವಾಗ ಆಯ ತಪ್ಪಿ ಬಿದ್ದಿದ್ದಾರೆ. ತೋಟದಲ್ಲಿ ಕೂಲಿ ಕೆಲಸ ಮುಗಿಸಿ ಹಿಂತಿರುಗುವಾಗ ಘಟನೆ ನಡೆದಿದ್ದು, ಸದ್ಯ ನಾಪತ್ತೆ ಆಗಿರೋ ಕಾರ್ಮಿಕನ ಹುಡುಕಾಟವನ್ನು ಅಗ್ನಿ ಶಾಮಕ ದಳದವರು ನಡೆಸಿದ್ದಾರೆ.
ಮರ ಬಿದ್ದು ಬೈಕ್ ಸವಾರ ಸಾವು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪರಿಸರದಲ್ಲಿ ಬೃಹತ್ ಆಲದ ಮರ ಬಿದ್ದು ಬೈಕ್ ಸವಾರ ಸಾವಿಗೀಡಾಗಿದ್ದಾರೆ. ಗಾಳಿ ಮಳೆ ಹಿನ್ನೆಲೆಯಲ್ಲಿ ಮರ ಧರೆಗುರುಳಿದ್ದು, ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ. ಬೈಕ್ ಸವಾರ ಪ್ರವೀಣ್ ಆಚಾರ್ಯ ಸಾವಿಗೀಡಾಗಿದ್ದಾರೆ. ಮರ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Rain News : ಕರಾವಳಿ, ಮಲೆನಾಡಲ್ಲಿ ಮಳೆಯ ರುದ್ರತಾಂಡವ; ಹಲವು ಕಡೆ ರಸ್ತೆಯೇ ಕುಸಿತ