Site icon Vistara News

Rain News | ಕೊಡಗಿನಲ್ಲಿ ಭಾರಿ ಶಬ್ದ ಸಹಿತ ಭೂಕುಸಿತ; ಅಪಾರ ಕೆಸರು ಮಿಶ್ರಿತ ನೀರು ಕಂಡು ಆತಂಕ

ಭೂಕುಸಿತ

ಕೊಡಗು: ಮಳೆ ಅವಾಂತರ (Rain News) ಜಿಲ್ಲೆಯಲ್ಲಿ ಮುಂದುವರಿದಿದ್ದು, ರಾಮಕೊಲ್ಲಿಯಲ್ಲಿ ಭಾರಿ ಶಬ್ದದೊಂದಿಗೆ ಅಪಾರ ಪ್ರಮಾಣದ ಕೆಸರು ಮಿಶ್ರಿತ ನೀರು ಹರಿದು ಬಂದಿದ್ದನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಮವಾರ ತಡರಾತ್ರಿ ಭಾರಿ ಶಬ್ದ ಕೇಳಿಬಂದಿತ್ತು. ಮಂಗಳವಾರ ಮುಂಜಾನೆ ದೃಶ್ಯವನ್ನು ನೋಡಿದಾಗ ಮತ್ತೊಂದು ಭೂಕುಸಿತವಾಯಿತೇ ಎಂದು ಗಾಬರಿಗೊಂಡಿದ್ದಾರೆ.

ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಬಳಿಯ ರಾಮ‌ಕೊಲ್ಲಿ ಎಂಬಲ್ಲಿ ಕಳೆದ 15 ದಿನಗಳಿಂದಲೇ ಕೆಸರು ಮಿಶ್ರಿತ ನೀರು ಹರಿದು ಬರುತ್ತಿತ್ತು‌. ಆದರೆ, ಭಾರಿ ಪ್ರಮಾಣದ ಕೆಸರು ಮಿಶ್ರಿತ ನೀರು, ಕಲ್ಲುಗಳು ಹಾಗೂ ಮರದ ದಿಮ್ಮಿಗಳು ರಾಮಕೊಲ್ಲಿಯ ಸೇತುವೆ ಬಳಿ ಶೇಖರಣೆಗೊಂಡಿದೆ. ಈ ಸ್ಥಳದಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿ ಭೂಕುಸಿತ ಸಂಭವಿಸಿ ನೀರಿನೊಂದಿಗೆ ಮಣ್ಣು ಹರಿದುಬಂದಿದ್ದರಿಂದ ಈ ಕೆಸರು ಮಿಶ್ರಿತ ನೀರು ಹರಿದು ಬಂದಿದೆ ಎನ್ನಲಾಗಿದೆ.

ಕೊಡಗು ಜಿಲ್ಲೆಯ ರಾಮ‌ಕೊಲ್ಲಿಯಲ್ಲಿ ಗುಡ್ಡದಿಂದ ಕೆಸರು ಮಿಶ್ರಿತ ನೀರು ಹರಿಯುತ್ತಿದೆ.

2ನೇ ಮೊಣ್ಣಂಗೇರಿಯ ರಾಮ‌ಕೊಲ್ಲಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದಲ್ಲಿ ವಾಸವಾಗಿವೆ. ಸೋಮವಾರ ರಾತ್ರಿ ಕೇಳಿದ ಶಬ್ದ 2018ರ ಜಲ ಪ್ರವಾಹದ ಸಮಯದಲ್ಲಿ ಕೇಳಿ ಬಂದ ರೀತಿಯ ಅನುಭವವಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಇದೀಗ ಮಳೆ ಕೊಂಚ ತಗ್ಗಿದ್ದು, ನೆಮ್ಮದಿಯಿಂದ ಜೀವನ ನಡೆಸಬಹುದು ಎಂದುಕೊಂಡಿದ್ದ ಗ್ರಾಮದ ಜನತೆಗೆ ಈಗ ಮತ್ತೊಂದು ಗುಡ್ಡ ಕುಸಿತವಾಗಿರುವುದು ಆತಕಂಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ತಮ್ಮ ಮನೆಗಳೇನಾದರೂ ಕುಸಿದರೆ ಎಂಬ ಭಯ ಸಹ ಕಾಣಿಸಿಕೊಂಡಿದೆ.

ಇದನ್ನೂ ಓದಿ | Rain News | ಬಂಟ್ವಾಳ-ಬೆಳ್ತಂಗಡಿ ರಾ.ಹೆ. 73ರ ಹಲವೆಡೆ ಗುಡ್ಡ ಕುಸಿತ; ಚಾರ್ಮಾಡಿಯಲ್ಲಿ ಅಲರ್ಟ್‌

Exit mobile version