ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಜತೆಗೆ ಗುಡುಗು ಸಿಡಿಲುಗಳ ಅಬ್ಬರವೂ ಜೋರಾಗಿದೆ. ಜಿಲ್ಲೆಯ ಇಳಕಲ್ ತಾಲೂಕಿನ ದಮ್ಮೂರು ಗ್ರಾಮದಲ್ಲಿ ರೈತರೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಾಟಾಪುರ ಗ್ರಾಮದ ನಿವಾಸಿಯಾಗಿರುವ ಸಣ್ಣನೀಲಪ್ಪ ಹಾದಿಮನಿ (೫೫) ಮೃತಪಟ್ಟ ರೈತರು. ಅವರು ದಮ್ಮೂರು ಸಮೀಪ ಇರುವ ತಮ್ಮ ಜಮೀನಿಗೆ ಹೋಗಿದ್ದ ವೇಳೆ ಸಿಡಿಲು ಬಡಿದಿದೆ. ಘಟನೆ ನಡೆದ ಸ್ಥಳ ಇಳಕಲ್ಲ ಗ್ರಾಮೀಣ ಠಾಣಾ ವ್ಯಾಪ್ತಿಗೆ ಬರುತ್ತದೆ.
೨೦ಕ್ಕೂ ಅಧಿಕ ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ೨೦ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಅರ್ಧಗೋಡೆ, ಮೇಲ್ಚಾವಣಿ ಸೇರಿದಂತೆ ವಿವಿಧ ಭಾಗದಲ್ಲಿ ಮನೆ ಕುಸಿತ ಕಂಡಿವೆ.
ನೀರಲಕೇರಿ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದೆ.
ಕೊಚ್ಚಿ ಹೋದ ಕೆರೆ ದೊಡ್ಡಿ
ನೀರಲಕೇರಿ ಗ್ರಾಮದಲ್ಲಿ ನೀರಿನ ರಭಸಕ್ಕೆ ಕುರಿ ದೊಡ್ಡಿಯೊಂದು ಕೊಚ್ಚಿ ಹೋಗಿದೆ. ಕುರಿಗಳು ಹೇಗೋ ದೊಡ್ಡಿಯಿಂದದ ಪಾರಾಗಿ ರಸ್ತೆ ಮಧ್ಯೆ ಬಂದು ನಿಂತಿರುವುದು ಕಾಣಸಿಕ್ಕಿದೆ.
ಇದನ್ನೂ ಓದಿ| ಗಣೇಶೋತ್ಸವ ಭದ್ರತೆಗೆ ಹೋಗಿದ್ದ ಪೊಲೀಸರು ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದು ನಿಜ, ಸಿಕ್ಕಿತು ಮೃತದೇಹ