ಧಾರವಾಡ: ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಬಳಿ ಬೆಣ್ಣೆಹಳ್ಳವು ಮಳೆಯಿಂದ (Rain News) ತುಂಬಿಹರಿಯುತ್ತಿದ್ದರೂ, ಅದರಲ್ಲಿಯೇ ಬೈಕ್ ಚಲಾಯಿಸುವಾಗ ನೀರಿನ ಸೆಳೆತಕ್ಕೆ ಸಿಲುಕಿ ಬೈಕ್ ಸಮೇತ ವ್ಯಕ್ತಿಯೊಬ್ಬ ಕೊಚ್ಚಿಹೋಗಿದ್ದು, ಮತ್ತೊಬ್ಬನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ತಡಹಾಳ ಗ್ರಾಮದ ಸದಾನಂದ ಪೂಜಾರ (೩೫) ನೀರುಪಾಲಾಗಿದ್ದು, ಇನ್ನೊಬ್ಬ ಸವಾರ ಶರಣಯ್ಯ ಹಿರೇಮಠ ವ್ಯಕ್ತಿ ಬಚಾವಾಗಿದ್ದಾರೆ. ಇವರು ಬೈಕ್ನಲ್ಲಿ ನರಗುಂದಕ್ಕೆ ಹೊರಟ್ಟಿದ್ದರು ಎಂದು ಹೇಳಲಾಗಿದೆ. ಈ ಭಾಗದಲ್ಲಿ ಭಾರಿ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ನರಗುಂದಕ್ಕೆ ಬೈಕ್ನಲ್ಲಿ ಹೊರಟಿದ್ದ ಸದಾನಂದ ಹಾಗೂ ಶರಣಯ್ಯ ಅವರು ಬೆಣ್ಣೆಹಳ್ಳದಲ್ಲಿ ನೀರಿನ ಹರಿವಿದ್ದರೂ ಚಲಾಯಿಸಿದ್ದಾರೆನ್ನಲಾಗಿದ್ದು, ಈ ವೇಳೆ ನೀರಿನ ಸೆಳೆತ ಹೆಚ್ಚಿದ್ದರಿಂದ ಬೈಕ್ ನಿಯಂತ್ರಣಕ್ಕೆ ಸಿಗಲಿಲ್ಲ ಎನ್ನಲಾಗಿದೆ. ಹೀಗಾಗಿ ಇಬ್ಬರೂ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ನೀರಿಗೆ ಧುಮುಕಿದ್ದು, ಶರಣಯ್ಯ ಅವರನ್ನು ರಕ್ಷಿಸಿದ್ದಾರೆ. ಆದರೆ, ಸದಾನಂದ ನೀರಿನ ಸೆಳೆತಕ್ಕೆ ಸಿಲುಕಿ ಬಹಳ ದೂರ ಹೋಗಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಈ ಸಂಬಂಧ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ದೌಡಾಯಿಸಿದ್ದು, ಸದಾನಂದ ಅವರ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ | Rain News | ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ವೃದ್ಧೆಯ ರಕ್ಷಣೆ