ಬೆಳಗಾವಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ (Rain News) ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಜೀವ ಹಾನಿ ಮತ್ತು ಆಸ್ತಿ ನಷ್ಟ ಉಂಟಾಗುತ್ತಿದೆ.. ಬೆಳಗಾವಿಯ ಬಿರಡಿ ಗ್ರಾಮದಲ್ಲಿ ಮಂಗಳವಾರ ನಿರಂತರವಾಗಿ ಮಳೆ ಸುರಿದಿದೆ. ಮಳೆ ಗಾಳಿಗೆ ಮದುವೆಗೆ ಹಾಕಿದ ಶಾಮಿಯಾನವೇ ಹಾರಿ ಹೋಗಿದೆ. ರಾಯಭಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಘಟನೆ ನಡೆದಿದ್ದು ಶಾಮಿಯಾನ ಹಾರದಂತೆ ಹಿಡಿದುಕೊಳ್ಳು ಮದುವೆ ಮನೆಯವರು ಪ್ರಯತ್ನಿಸುತ್ತಿರುವ ವಿಡಿಯೊ ವೈರಲ್ ಆಗಿದೆ
ಮಳೆಯ ಹೊಡೆತಕ್ಕೆ ಬೆಳಗಾವಿಯ ಕಾಗವಾಡ ತಾಲೂಕಿನ ಉಗಾರಬುರ್ದುಕ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಯ ಚಾವಣಿ ಕುಸಿದಿದೆ. ಗಾಳಿ ಮಳೆಗೆ ಮೂರು ಕೊಠಡಿಗಳ ಶೆಡ್ ಹಾರಿಹೋಗಿದೆ. ಶಾಲೆಯ ಒಳಗಿನ ಪಿಠೋಪಕರಣಗಳಿಗೂ ಹಾನಿಯಾಗಿದೆ. ಇತ್ತ ಬಿರಡಿ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜತೆಗೆ ಮನೆಗೆ ಚಾವಣಿಯು ಕುಸಿದಿದ್ದು, ಕುಟುಂಬಸ್ಥರು ಆತಂಕದಲ್ಲೇ ದಿನದೂಡುವಂತಾಗಿದೆ.
ಕೆರೆಯಂತಾದ ರಸ್ತೆಯಲ್ಲಿ ಮುಗ್ಗರಿಸಿ ಬಿದ್ದ ಸವಾರ
ಚಾಮರಾಜನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಬಿ. ರಾಚಯ್ಯ ಜೋಡಿ ರಸ್ತೆ ಕೆರೆಯಂತಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ತುಂಬಿದೆ ಎಂದು ಆರೋಪಿಸಲಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಜಿಲ್ಲಾಡಳಿತ ವಿರುದ್ಧ ಜನರು ಕಿಡಿಕಾರಿದ್ದಾರೆ. ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಕೆಲವು ವಾಹನಗಳು ಕೆಟ್ಟು ಹೋದವು. ಮತ್ತೊಂದು ಕಡೆ ಬೈಕ್ ಸವಾರರೊಬ್ಬರು ರಸ್ತೆ ಕಾಣದೆ ಮುಗ್ಗರಿಸಿ ಬಿದ್ದಿದ್ದಾರೆ.
ಇದನ್ನೂ ಓದಿ: Rain News: ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ; ಜನರು ತತ್ತರ, ಸಿಡಿಲಿಗೆ ಆರು ಕುರಿ ಬಲಿ
ಬೆಂಗಳೂರಲ್ಲಿ ಗುಡುಗಿದ ವರುಣ
ರಾಜಧಾನಿ ಬೆಂಗಳೂರಲ್ಲಿ ಮಂಗಳವಾರ ಮಧ್ಯಾಹ್ನದಿಂದ ಮಳೆಯಾಗುತ್ತಿದೆ. ಮಂಗಳವಾರ ಮಧ್ಯಾಹ್ನ ವ್ಯಾಪಕ ಮಳೆಯಾಗಿತ್ತು. ಅರ್ಧ ತಾಸು ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿತ್ತು. ಸಂಜೆಯ ಹೊತ್ತಿಗೆ ಧಾರಾಕಾರ ಮಳೆಯಾಗುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವವರು ಪರದಾಡಿದರು. ಮಳೆಗೆ ಕೆಲವು ಕಡೆ ಮರಗಳು ಧರೆಗುರುಳಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ
ಕೋಲಾರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಬಂಗಾರಪೇಟೆ ತಾಲೂಕಿನ ಮೂಗನಹಳ್ಳಿ ಬಳಿ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಬೂದಿಕೋಟೆ ಬಳಿಯ ಹುನುಕುಳ ದೊಡ್ಡಿ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ರೈತರ ಪಾಲಿ ಹೌಸ್ ಸೇರಿದಂತೆ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ