ಬೆಳಗಾವಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ದುರಂತಗಳೂ ನಡೆಯುತ್ತಿವೆ. ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಮನೆಯೊಂದು ಕುಸಿದು ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ.
ಮೊದಲೇ ದುರ್ಬಲವಾಗಿದ್ದ ಮನೆ ಮಳೆಯಿಂದಾಗಿ ಇನ್ನಷ್ಟು ಜರ್ಜರಿತವಾಗಿತ್ತು. ಶನಿವಾರ ಸಂಜೆಯ ವೇಳೆ ಮನೆ ಕುಸಿದು ಬಿದ್ದ ಪರಿಣಾಮ ನಾಲ್ವರು ಮಣ್ಣಿನಡಿ ಸಿಲುಕಿದರು. ಯಲ್ಲವ್ವ ಬಾಗಿಲದ (೪೦) ಮತ್ತು ಅವರ ಮಗು ಪ್ರಜ್ವಲ್ ಬಾಗಿಲದ (೫) ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
ಮನೆಯಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಯರಗಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಣ್ಣಿನಲ್ಲಿ ಸಿಲುಕಿದ್ದ ತಾಯಿ-ಮಗನ ಮೃತದೇಹಗಳನ್ನು ಪೊಲೀಸರು ಆಗಮಿಸಿ ಹೊರತೆಗೆದರು. ಸ್ಥಳಕ್ಕೆ ಯರಗಟ್ಟಿ ತಹಸೀಲ್ದಾರ್ ಮಹಾಂತೇಶ ಮಠದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಯರಗಟ್ಟಿ-ಮುರಗೋಡ ಠಾಣೆ ಪೊಲೀಸರೂ ಭೇಟಿ ನೀಡಿದ್ದಾರೆ.
ಇದನ್ನೂ ಓದಿ | Rain News | ರಾಜ್ಯದ ವಿವಿಧೆಡೆ ಧಾರಾಕಾರ ಮಳೆ; ಹಲವು ಮನೆಗಳಿಗೆ ಹಾನಿ, ಜಮೀನಿಗೆ ನುಗ್ಗಿದ ನೀರು