ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ರಣಭೀಕರ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದಾರೆ. ತೊಣ್ಣೂರು ಕೆರೆ, ಗುತ್ತಲು ಕೆರೆ, ಬೂದನೂರು ಕೆರೆ ಹಾಗೂ ಹಾಲದಹಳ್ಳಿ ಕೆರೆ, ಕಾರಸವಾಡಿ ಕೆರೆ, ಲೋಕಪಾವನಿ ಕೆರೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.
ಬೂದನೂರು ಕೆರೆ ಒಡೆದು ಮೈಸೂರು- ಬೆಂಗಳೂರು ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಮದ್ದೂರಿನ ಬಳಿ ಮೈ- ಬೆಂ ಹೆದ್ದಾರಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಮದ್ದೂರು ಟಿವಿ ವೃತ್ತದಿಂದ ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಲು ಮಾರ್ಗ ಬದಲಾವಣೆ ಮಾಡಲಾಗಿದೆ. ಮಂಡ್ಯದ ಗುತ್ತಲಿನ ಬಳಿ ರಸ್ತೆ ಕೊಚ್ಚಿಹೋಗಿರುವ ಕಾರಣದಿಂದ ಮಂಡ್ಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಭಾರಿ ಮಳೆಯ ಕಾರಣದಿಂದ ಮಂಡ್ಯ-ಬೆಂಗಳೂರು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಡ್ಯ ನಗರಕ್ಕೆ ಬರಲು ಸುತ್ತಿ ಬಳಸಿ ಬರುವಂತಾಗಿದ್ದು, ವಾಹನ ಸವಾರರು ಪರದಾಟ ಅನುಭವಿಸುವಂತಾಗಿದೆ. ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ದಟ್ಟಣೆ ಸರಿಪಡಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದ ಚಿತ್ರಣ ಕಂಡು ಬಂತು.
ಇದನ್ನೂ ಓದಿ | Rain News | ಹರಿಯುವ ನೀರಿನಲ್ಲಿ ರಸ್ತೆ ದಾಟಲು ಹೋಗಿ ಬೈಕ್ ಸವಾರ ನೀರುಪಾಲು; ಮತ್ತೊಬ್ಬ ಪಾರು
ಉಕ್ಕಿ ಹರಿದ ಲೋಕಪಾವನಿ; ಸಬ್ಬನಕುಪ್ಪೆಗೆ ಜಲಕಂಟಕ
ಧಾರಾಕಾರ ಮಳೆಗೆ ಶ್ರೀರಂಗಪಟ್ಟಣದಲ್ಲಿ ಲೋಕಪಾವನಿ ನದಿ ಉಕ್ಕಿ ಹರಿಯುತ್ತಿದ್ದು, ಸಬ್ಬನಕುಪ್ಪೆ ಗ್ರಾಮಕ್ಕೆ ಜಲ ಕಂಟಕ ಎದುರಾಗಿದೆ. ಹಳ್ಳಕೊಳ್ಳಗಳಿಂದ ನೀರು ತುಂಬಿ ಹರಿಯುತ್ತಿದ್ದು, ಗ್ರಾಮದ ರಸ್ತೆ ಕೊಚ್ಚಿ ಹೋಗಿದೆ. ಅಪಾಯದ ಮಟ್ಟದಲ್ಲಿ ಲೋಕಪಾವನಿ ನದಿ ಹರಿಯುತ್ತಿದ್ದು, ರೈತನ ಬೆಳೆ ಸಂಪೂರ್ಣ ಹಾಳಾಗಿದೆ. ಪ್ರವಾಹದಿಂದ ಸಬ್ಬನಕುಪ್ಪೆ, ಚಂದಗಿರಿಕೊಪ್ಪಲು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ನಾಲ್ಕು ಮನೆಗಳ ಗೋಡೆ ಕುಸಿತ
ರಾತ್ರಿ ಸುರಿದ ಭಾರಿ ಮಳೆಗೆ ಗುತ್ತಲು ಕೆರೆ ಕೋಡಿ ಬಿದ್ದು, 4 ಮನೆಗಳ ಗೋಡೆ ಕುಸಿದಿದೆ. ಮಂಡ್ಯದ ಗುತ್ತಲು, ಕೆ.ಎಂ.ದೊಡ್ಡಿ ರಸ್ತೆ ಜಲಾವೃತಗೊಂಡಿದ್ದು, ಗುತ್ತಲು ಬಡಾವಣೆಯ ಸಮೀಪದ ಅರಕೇಶ್ವರ ನಗರದಲ್ಲಿ ಗೋಡೆ ಕುಸಿದಿದ್ದು, ಪರಿಹಾರಕ್ಕಾಗಿ ಸ್ಥಳೀಯರು ಅಂಗಲಾಚಿದ್ದಾರೆ. ಇತ್ತ ಹಾಲದಹಳ್ಳಿ ಕೆರೆ ಕೋಡಿ ಒಡೆದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಾಲದಹಳ್ಳಿ ಗ್ರಾಮದಲ್ಲಿ ಪ್ರವಾಹದಿಂದ ಲಕ್ಷಾಂತರ ರೂ. ಬೆಳೆ ನಾಶವಾಗಿದೆ. ರಭಸವಾಗಿ ಹರಿದು ಬರುತ್ತಿರುವ ನೀರು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಆಯಿಲ್ ಫ್ಯಾಕ್ಟರಿ ಬಳಿ ರಸ್ತೆ ಕುಸಿತ
ಮಂಡ್ಯದ ಕೆ.ಎಂ.ದೊಡ್ಡಿಯ ಹೊರ ವಲಯದ ಆಯಿಲ್ ಫ್ಯಾಕ್ಟರಿ ಬಳಿ ರಸ್ತೆ ಕುಸಿದಿದೆ. ಹೆಬ್ಬಳ್ಳ ಹಳ್ಳ ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ರಸ್ತೆ ಕುಸಿದಿದೆ. ಕುಸಿದಿರುವ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಲಿಂಗಾಪುರ ಗ್ರಾಮಸ್ಥರ ಜಾಗರಣೆ
ಧಾರಾಕಾರ ಮಳೆಯಿಂದ ಲಿಂಗಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು ಮಳೆಗೆ ಆಹುತಿಯಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ನೀರು ನುಗ್ಗಿದ ಕಾರಣ ಆತಂಕದಲ್ಲೇ ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು. ದಿನಸಿ ಸೇರಿದಂತೆ ಮನೆಯಲ್ಲಿದ್ದ ಎಲ್ಲ ವಸ್ತುಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಮಕ್ಕಳ ಪಠ್ಯ ಪುಸ್ತಕ, ದಾಖಲೆ ಪತ್ರಗಳಿಗೂ ಹಾನಿಯಾಗಿದೆ. ಬೆಳಗ್ಗಿನ ಉಪಾಹಾರಕ್ಕೂ ಗ್ರಾಮದ ಜನರು ಪರಿತಪಿಸುವಂತಾಗಿದೆ.
ಭೋರ್ಗರೆದು ಹರಿಯುತ್ತಿರುವ ಕಾರಸವಾಡಿ ಕೆರೆ
ಶುಕ್ರವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಮಂಡ್ಯದ ಕಾರಸವಾಡಿ ಕೆರೆ ಭರ್ತಿಯಾಗಿ ಕೋಡಿ ಒಡೆದಿದೆ. ಭೋರ್ಗರೆದು ಹರಿಯುತ್ತಿರುವ ತೊರೆ ನೀರಿನಿಂದ ಪಕ್ಕದ ಜಮೀನುಗಳು ಜಲಾವೃತವಾಗಿದೆ. 50ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿ, ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆಯ ನಾಶವಾಗಿದೆ. ಜತೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ಮದ್ದೂರಿನಲ್ಲಿ ಮಾರ್ಗ ಬದಲಾವಣೆ
ತೊಣ್ಣೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಗ್ರಾಮದ ಬೀದಿಯಲ್ಲಿ ಹರಿಯುತ್ತಿದೆ. ನೀರು ಗ್ರಾಮಕ್ಕೆ ನುಗ್ಗದಂತೆ ತಡೆಯಲು ಗ್ರಾಮಸ್ಥರು ಹಿಟಾಚಿ ಸಹಾಯದಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ. ಗ್ರಾಮಕ್ಕೆ ಯಾರೂ ಬರದಂತೆ ಟೇಪ್ ಹಾಕಿ ನಿರ್ಬಂಧಿಸಿದ್ದಾರೆ. ಮಳೆ ನೀರಿನಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಳುಗಡೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಶಾಸಕ ಪುಟ್ಟರಾಜು ದೌಡಾಯಿಸಿದ್ದಾರೆ. ಅವರ ಬಳಿ ಗ್ರಾಮಸ್ಥರು ಅಳಲು ತೋಡಿಕೊಂಡರು.
ಇದನ್ನೂ ಓದಿ | Rain news | ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ಇನ್ನೂ 5 ದಿನ ಭಾರಿ ಮಳೆ