Site icon Vistara News

Rain News | ಉಕ್ಕಿ ಹರಿಯುತ್ತಿರುವ ವೇದಾವತಿ, ಶನಿ ದೇವಸ್ಥಾನದಲ್ಲಿ ಸಿಲುಕಿದ 7 ಜನರ ರಕ್ಷಣೆಗೆ ಹೋದ ಬೋಟೇ ಪಲ್ಟಿ

vedavati river

ಬಳ್ಳಾರಿ: ಬಿಸಿಲನಾಡಿನಲ್ಲಿ ಮಳೆ ಮತ್ತು ವೇದಾವತಿ ನದಿಯ ಅಬ್ಬರ, ಬಿಸಿಲಿನ ತಾಪದಿಂದ ಸಹಿಸಿಕೊಂಡವರು ಈಗ ಮಳೆಯ ರಭಸದ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಚಿತ್ರದುರ್ಗದ ವಿವಿಸಾಗರ ಜಲಾಶಯದ ಕೋಡಿ ಬಿದ್ದ ಪರಿಣಾಮ ವೇದಾವತಿ ನದಿ ಉಕ್ಕಿ ಹರಿಯುತ್ತಿರುವುದು ಮತ್ತು ನಿರಂತರ ಮಳೆಯಿಂದಾಗಿ ಕೇವಲ ಜಮೀನುಗಳು ಜಲಾವೃತವಾಗಿಲ್ಲ, ಊರುಗಳಿಗೆ ನೀರು ನುಗ್ಗಿದೆ. ಗ್ರಾಮದಲ್ಲಿ ತೆಪ್ಪದಲ್ಲಿಯೇ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

ಸಿರುಗುಪ್ಪದ ಶನಿ ಮಹಾತ್ಮ ದೇವಸ್ಥಾನಕ್ಕೆ ಹೋಗಿ ನದಿಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆಗೆ ತೆರಳಿದ್ದ ಬೋಲ್ಡ್ ಪಲ್ಟಿಯಾಗಿದೆ. ಹೀಗಾಗಿ ಸುಮಾರು 7 ಮಂದಿ ದೇವಸ್ಥಾನದ ನಡುಗಡ್ಡೆಯಲ್ಲಿಯೇ ಉಳಿದಿದ್ದಾರೆ. ವಾಹನ ಸಂಚಾರ ಸ್ಥಗಿತವಾಗಿ ಬಿಕಾಂ ಮತ್ತು ಬಿಎ ಸೆಮಿಷ್ಟರ್ ಪರೀಕ್ಷೆಗೆ ಹೋಗಲಾಗದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಇದನ್ನು ಗಮನಿಸಿ ವಿಎಸ್‌ಕೆ ವಿವಿ ಪರೀಕ್ಷೆಯನ್ನೇ ಮುಂದೂಡಿದೆ.

ಸಿರುಗುಪ್ಪ ತಾಲೂಕಿನ ಮುದೇನೂರು ಮತ್ತು ಬಲಕುಂದಿ ಸಮೀಪದ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳಿದ ಸ್ವಾಮೀಜಿ ಸೇರಿದಂತೆ ನಾಲ್ಕು ಜನರು ವೇದಾವತಿ ನದಿ ನೀರು ಹೆಚ್ಚಾಗಿ ದೇವಸ್ಥಾನದಲ್ಲಿಯೇ ಸಿಲುಕಿದ್ದಾರೆ. ಇವರ ರಕ್ಷಣೆಗೆ ಬೋಟುಗಳಲ್ಲಿ ತೆರಳಿದ್ದ 3 ಜನ ಸಿಬ್ಬಂದಿಗಳ ಬೋಟ್ ಮಗುಚಿದೆ, ಅವರು ಈಜಿ ದೇವಸ್ಥಾನ ಸೇರಿದ್ದಾರೆ. ಬಳ್ಳಾರಿ ಮೊತ್ತೊಂದು ರಕ್ಷಣಾ ಸಿಬ್ಬಂದಿ ಬೋಟ್ ರಕ್ಷಣೆಗೆ ತೆರಳಿದ್ದಾರೆ, ಆದರೆ ನದಿಯಲ್ಲಿ ನೀರಿನ ಪ್ರಮಾಣ ಮತ್ತು ಸುಳಿ ಹೆಚ್ಚಾಗಿರುವುದರಿಂದ ದೇವಸ್ಥಾನದಲ್ಲಿಯೇ ಉಳಿದಿದ್ದಾರೆ. ಶನಿ ಮಹಾತ್ಮ ದೇವಸ್ಥಾನದಲ್ಲಿಯೇ ರಕ್ಷಣೆಗೆ ತೆರಳಿದ್ದ ೩ ಜನ ಸಿಬ್ಬಂದಿ ಸೇರಿ ಒಟ್ಟು ೭ ಜನರು ಇದ್ದಾರೆ. ಇವರ ರಕ್ಷಣೆಗೆ ಸುರಪುರದಿಂದ ಜಿಲ್ಲಾಡಳಿತವು ಎನ್‌ಡಿಆರ್‌ಎಫ್‌ ತಂಡವನ್ನು ಕರೆಸುತ್ತಿದ್ದಾರೆ.

ರಾರಾವಿ ಸೇತುವೆ ಮೇಲೆ ನೀರು, ಸಂಚಾರ ಸ್ಥಗಿತ
ವೇದಾವತಿ ನದಿಗೆ ನಿರ್ಮಿಸಿರುವ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮೇಲೆ ನೀರು ಹರಿದು ಪರಿಣಾಮ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದಾಗಿ ಆಂಧ್ರ ಪ್ರದೇಶದ ಆದೋನಿ ಸೇರಿದಂತೆ ರಾಜ್ಯದ ಗಡಿಭಾಗದ ಸುಮಾರು 14ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ಇದರಿಂದಾಗಿ ಬಿಎ, ಬಿಕಾಂ ನಾಲ್ಕನೇ ಸಮಿಸ್ಟರ್ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿಎಸ್ಕೆ ವಿವಿಯು ಕೂಡಲೇ ಇಂದಿನ ಪರೀಕ್ಷೆಯನ್ನು ವಿವಿಯ ಮುಂದೂಡಿದೆ ಎಂದು ವಿಸಿ ಸಿದ್ದ ಹಲಗೂರು ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ..

ನದಿಯಲ್ಲಿ ಹರಿಯುತ್ತಿದೆ ಎರಡು ಪಟ್ಟು ನೀರು!
ವೇದಾವತಿ ನದಿಯಲ್ಲಿ ಗರಿಷ್ಠವೆಂದರೂ 10 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು, ಆದರೆ ಚಿತ್ರ ದುರ್ಗದ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಸೆ.2ರಂದು ಕೋಡಿ ಬಿದ್ದಿರುವ ಕಾರಣ ಹೆಚ್ಚುವರಿಯಾಗಿ 10 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಗಡೆ ಹರಿದು ಬರುತ್ತಿದೆ, ಇದರಿಂದಾಗಿ ವೇದಾವತಿ ನದಿಯಲ್ಲಿ ಮಳೆ ನೀರು ಮತ್ತು ಕೋಡಿ ನೀರು ಸೇರಿ 19500 ಕ್ಯೂಸೆಕ್ ನೀರಿನೊಂದಿಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುವ ಭೀತಿಯಲ್ಲಿದ್ದರೆ, ಇನ್ನು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗಳು ಜಲಾವೃತ್ತವಾಗಿವೆ. ನಿರಂತರ ಮಳೆ ಸುರಿದರೆ ವೇದಾವತಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಗ್ರಾಮಗಳಿಗೆ ನುಗ್ಗಿದ ನೀರು
ವೇದಾವತಿ ನದಿಯು ಬಳ್ಳಾರಿ, ಸಿರುಗುಪ್ಪ ಮತ್ತು ಕುರುಗೋಡು ತಾಲೂಕಿನ ಸ್ವಲ್ಪಭಾಗದಲ್ಲಿ ಹಾದು ಹೋಗುತ್ತದೆ. ಪ್ರತಿಬಾರಿಯು ವೇದಾವತಿ ನದಿಯು ಉಕ್ಕಿಹರಿದರೂ, ಗ್ರಾಮಗಳಿಗೆ ನೀರು ನುಗ್ಗುತ್ತಿರಲಿಲ್ಲ, ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವೇದಾವತಿ ನೀರಿನ ಪ್ರವಾಹ ಹೆಚ್ಚಾಗಲು ಕಾರಣವಾಗಿದೆ. ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ನೀರು ನುಗ್ಗಿದ ಪರಿಣಾಮ ಸುಮಾರು 100 ಹೆಚ್ಚು ಮನೆಗಳು ಜಲಾವೃತ್ತವಾಗಿದೆ. ಸಿರುಗುಪ್ಪ ತಾಲೂಕಿನ ಕೆಲವೊಂದು ಗ್ರಾಮಗಳಿಗೆ ನದಿ ನೀರು ನುಗ್ಗಿವೆ. ಅಲ್ಲಿನ ಜನರನ್ನು ಶಾಲೆ ಮತ್ತು ದೇವಸ್ಥಾನಗಳಲ್ಲಿ ಆಶ್ರಯ ನೀಡಿ, ಜಿಲ್ಲಾಡಳಿತ ಕಾಳಜಿ ಕೇಂದ್ರ ತೆಗೆದು ಆಹಾರ ಪೂರೈಕೆ ಮಾಡುತ್ತಿದೆ.

ಗ್ರಾಮದಲ್ಲಿಯೇ ತೆಪ್ಪ ಸಂಚಾರ
ಕೇವಲ 10 ಸಾವಿರ ಕ್ಯೂಸೆಕ್ ನೀರು ಬಂದರೆ ಗ್ರಾಮದ ಒಂದೆರೆಡು ಗುಡಿಸಲುಗಳಿಗೆ ನೀರು ಹೋಗುತ್ತಿತ್ತು.
ಆದರೆ ಅಪಾಯ ಮಟ್ಟ ಮೀರಿ ನದಿಯು ಹರಿಯುತ್ತಿರುವುದರಿಂದ ಕಳೆದ ರಾತ್ರಿಯಿಂದ ಬಸರಕೋಡು ಗ್ರಾಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತೆಪ್ಪ ದಲ್ಲಿಯೇ ಜನರನ್ನು ಕಾಳಜಿಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ. ನದಿಯ ಪಾತ್ರದಲ್ಲಿರುವ 18 ಹಳ್ಳಿಗಳ ಜನರ ಕೊಂಚ ಆತಂಕಗೊಂಡಿದ್ದಾರೆ. ನದಿಯ ಪಾತ್ರದಲ್ಲಿರುವ ಗ್ರಾಮಗಳ ಜಮೀನುಗಳ ವಿವಿಧ ಬೆಳೆಗಳು ಜಲಾವೃತವಾಗಿವೆ. ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮುಂದುವರಿದರೆ ಬೆಳೆ ಹಾನಿಯಾಗುವ ಸಂಭವವಿದೆ.

ಕಾಳಜಿ ಕೇಂದ್ರ ತೆರೆಯಲು ಸೂಚನೆ
ವೇದಾವತಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯ ದಡದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುವ ಸಂಭವ ಇರುವುದರಿಂದ ಗ್ರಾಮಗಳ ಜನರಿಗೆ ಸರಕಾರಿ ಶಾಲೆ ಅಥವಾ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆಗೆದು ಆಹಾರ ವ್ಯವಸ್ಥೆ ಮಾಡಬೇಕೆಂದು ಸಂಬಂಧ ಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಆಯಾ ತಾಲೂಕಿನ ತಹಸೀಲ್ದಾರರು ಸೂಚಿದ್ದಾರೆ.

Exit mobile version