ಕಾರವಾರ (ಉತ್ತರ ಕನ್ನಡ): ರಾಜ್ಯ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಅಬ್ಬರ (Rain News) ಜೋರಾಗಿದ್ದರೆ, ಕೆಲವು ಭಾಗಗಳಲ್ಲಿ ಅನಾವೃಷ್ಟಿ ಕಾಡುತ್ತಿದೆ. ಈ ದ್ವಂದ್ವ ಸ್ಥಿತಿಯನ್ನು ಸಂಭಾಳಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಕಂದಾಯ ಸಚಿವ ಸಿ. ಕೃಷ್ಣ ಭೈರೇಗೌಡ (Krishna Byregowda) ಹೇಳಿದ್ದಾರೆ. ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಸಚಿವ ಕೃಷ್ಣ ಭೈರೇಗೌಡ ಮಾತನಾಡಿದರು.
ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಈ ಬಾರಿಯ ಮಳೆಗೆ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ ಆರು ಮಂದಿ, ಉಡುಪಿ ಜಿಲ್ಲೆಯಲ್ಲಿ ನಾಲ್ವರು, ಉತ್ತರ ಕನ್ನಡದಲ್ಲಿ ಮೂವರು ಸಿಡಿಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. 47 ಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ, ನೂರಾರು ಮನೆಗಳಿಗೆ ಹಾನಿಯಾಗಿದೆ ಎಂದು ವಿವರ ನೀಡಿದರು. ಬೆಳೆ, ಮನೆ ಹಾನಿಯಾಗಿದ್ದಕ್ಕೆ ಸರ್ಕಾರ ಪರಿಹಾರ ಕೊಡುತ್ತದೆ ಎಂದು ವಿವರಿಸಿದರು.
ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಮನೆಗೂ ಹೋಗಿದ್ದಾರೆ. ಅವರಿಗೆ ಸಚಿವ ಮಂಕಾಳು ವೈದ್ಯ ಸಾಥ್ ನೀಡಿದ್ದಾರೆ. ಸಚಿವರಿಗೆ ಶಾಸಕ ದಿನಕರ ಶೆಟ್ಟಿ, ಉತ್ತರ ಕನ್ನಡ ಡಿಸಿ ಪ್ರಭುಲಿಂಗ ಕವಳಿಕಟ್ಟಿ ವಿವರ ನೀಡಿದರು. ಜತೆಗೆ ಸಚಿವರು ಮನೆಯವರಿಂದಲೂ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಮಳೆ ಹಾನಿಯ ಕುರಿತು ಅಧಿಕಾರಿಗಳ ಜೊತೆ ಸಚಿವರು ಚರ್ಚೆ ನಡೆಸಿದರು. ಮೃತ ಇಬ್ಬರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಲಾಯಿತು.
ಮೋಡ ಬಿತ್ತನೆ ಬಗ್ಗೆ ಮಾಸಾಂತ್ಯ ತೀರ್ಮಾನ
ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿದ್ದರೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಜುಲೈ ಕೊನೆಯ ವಾರದವರಗೆ ನೋಡಿ ಮೋಡ ಬಿತ್ತನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಮೋಡ ಬಿತ್ತನೆ ಬಗ್ಗೆ ಯೋಚನೆ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಇದನ್ನು ಓದಿ : Rain News : ಮಳೆ ಅನಾಹುತಕ್ಕೆ ಹಾಸನದಲ್ಲಿ ಮಹಿಳೆ ಬಲಿ
ಮಳೆಗೆ ತತ್ತರಿಸಿದ ಕರಾವಳಿ ಸ್ವಲ್ಪ ನಿರಾಳ
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಕರಾವಳಿಯ ಬದುಕು ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅದರೆ, ಶನಿವಾರ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ನಿರಾಳತೆ ಮೂಡಿಸಿದೆ. ಆದರೆ, ಅನೇಕ ಭಾಗಗಳಲ್ಲಿ ನೀರು ಮನೆಗಳಿಗೆ ನುಗ್ಗಿ ಆದ ಅವಾಂತರ, ಗುಡ್ಡಗಳು ಕುಸಿದು ಉಂಟಾದ ಸಮಸ್ಯೆಗಳಿಂದ ಹೊರಬರಲು ಇನ್ನೂ ಕೆಲವು ದಿನಗಳೇ ಬೇಕು.